ಉತ್ತಮ ಕೆಲಸ ಮಾಡಿ ಮಾನವ ಧರ್ಮ ಪಾಲಿಸಿ

FotoJet (1)
Published on

ಧರ್ಮಾಧಿಕಾರಿ ಜಯರಾಂ ಕರೆ | ಬಾಗೇಪಲ್ಲಿಯಲ್ಲಿ ಶ್ರೀಕೈವಾರ ತಾತಯ್ಯನವರ ಜಯಂತ್ಯುತ್ಸವ

 ಬಾಗೇಪಲ್ಲಿ : ಕೆಟ್ಟ ಕೆಲಸ ಮಾಡಿ ಪಾಪಿಯಾಗುವ ಬದಲು ಒಳ್ಳೆಯ ಕೆಲಸ ಮಾಡಿ ಮಾನವನಾಗಿ ತಾತಯ್ಯ ಅವರ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಶ್ರೀ ಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಂ ಕರೆ ನೀಡಿದರು.

ಪಟ್ಟಣದ ಖಾಸಗಿ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸದ್ಗುರು ಶ್ರೀ ಯೋಗಿನಾರೇಯಣ ಜಯಂತ್ಯುತ್ಸವದಲ್ಲಿ ಪ್ರವಚನ ನೀಡಿದರು.

ಮಾನವ ಜನ್ಮದ ಶ್ರೇಷ್ಠತೆ ಎಂತಹುದು, ಶ್ರೇಷ್ಠತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು. ಮನುಷ್ಯರು ಮತ್ತು ಪ್ರಾಣಿಗಳಿಗಿರುವ ವ್ಯತ್ಯಾಸ, ವಿವೇಕದ ಬಗ್ಗೆ ತಿಳಿಸಿದರು.

ಸದ್ಗುರು ತಾತಯ್ಯ ಈ ಭಾಗದಲ್ಲಿ ಜನಿಸಿ ವಿಶ್ವಕ್ಕೆ ಮಾರ್ಗದರ್ಶನ ನೀಡಿದ್ದಾರೆ. ನಾವು ಅವರಿಗೆ ಭಕ್ತರಾಗಿ ಶರಣಾಗತಿಯಾಗಬೇಕು. ಆಗ ಏನೇ ಕೆಡುಕುಗಳಿದ್ದರೂ ಅದನ್ನು ಸರಿಪಡಿಸಿಕೊಳ್ಳಲು ಗುರುವಿನ ಅನುಗ್ರಹ ಸಿಗುತ್ತದೆ. ಎಂದಿಗೂ ಪರರ ಸ್ವತ್ತಿಗೆ, ಪರಸ್ತ್ರೀಯರ ಬಗ್ಗೆ ಆಸೆ ಪಡಬಾರದು. ನಮಗೇನಿದೆಯೋ ಅದರಲ್ಲಿಯೇ ತೃಪ್ತಿ ಪಡಬೇಕು. ಆಗ ಮಾತ್ರ ಮನಸ್ಸಿಗೆ ಶಾಂತಿ ಸಿಗುತ್ತದೆ. ಯಾರಲ್ಲಿ ಮನಃಶಾಂತಿ ಇರುತ್ತದೆಯೋ ಅವರಿಗೆ ಗುರುವಿನ ಅನುಗ್ರಹ ಇರುತ್ತದೆ. ಇದಕ್ಕಾಗಿಯೇ ತಾತಯ್ಯನವರು ಈ ಲೋಕಕ್ಕೆ ಶ್ರೀರಾಮ ಭವತಾರಕ ಮಂತ್ರವನ್ನು ಕೊಟ್ಟಿದ್ದಾರೆ. ಅದನ್ನು ಸದಾಕಾಲ ಅಂತರಂಗದಲ್ಲಿ ಸ್ಮರಣೆ ಮಾಡಬೇಕು ಎಂದು ತಿಳಿಸಿದರು.ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯ ಅವರ ಭಾವಚಿತ್ರವುಳ್ಳ ಹೂವಿನ ಪಲ್ಲಕ್ಕಿಗೆ ಅಲಂಕಾರ ಮಾಡಿ ಬೃಹತ್ ಪಾದಯಾತ್ರೆ ಮೆರವಣಿಗೆ ನಡೆಸಲಾಯಿತು. ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಹಾಗೂ ಸುತ್ತಮುತ್ತಲಿನ ತಾಲೂಕುಗಳ ಭಜನಾ ವೃಂದದವರು ತಾತಯ್ಯನವರ ಕೀರ್ತನೆಗಳನ್ನು ಹಾಡುತ್ತಾ ಮುಖ್ಯರಸ್ತೆಯಲ್ಲಿ ಸಾಗಿದರು. ಸುಮಾರು 3 ಕಿಮೀ ಸಂಕೀರ್ತನಾ ಪಾದಯಾತ್ರೆ ಸಾಗಿತು.ಪ್ರವಚನದ ನಂತರ ಸದ್ಗುರು ತಾತಯ್ಯನವರಿಗೆ ಅಷ್ಠಾನದಾವ ಸೇವೆಯನ್ನು ಸಲ್ಲಿಸಲಾಯಿತು. ಮಹಾಮಂಗಳಾರತಿ ಪ್ರಸಾದ ವಿನಿಯೋಗ ಮಾಡಲಾಯಿತು. ವಿವಿಧ ಕಡೆಗಳಿಂದ ಸುಮಾರು 3 ಸಾವಿರಕ್ಕೂ ಹೆಚ್ಚಿನ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಮಾಜಿ ಶಾಸಕ ಎನ್.ಸಂಪಂಗಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಸೂರ್ಯ ಕನ್ವೆನ್ಷನ್ ಕಲ್ಯಾಣ ಮಂಟಪದ ಮಾಲೀಕ ಶ್ರೀಮತಿ ರೋಹಿಣಿ ಮತ್ತು ಶ್ರೀ ಭಾರ್ಗವ್, ಜಿಪಂ ಮಾಜಿ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಕೆ.ನರಸಿಂಹಪ್ಪ, ಬಿ.ಆರ್.ನರಸಿಂಹನಾಯ್ಡ, ಅಪ್ಪಯ್ಯಬಾಬು, ಪೈನಾನ್ಸ್ ವೆಂಕಟೇಶ್, ಕೈವಾರದ ವಿಶ್ವಸ್ಥ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net