

ಶೃಂಗೇರಿ: ಬೇರೆಯವರಿಂದ ಒಳ್ಳೆಯದನ್ನು ಬಯಸಬೇಕಾದರೆ ನಾವು ಇತರರಿಗೆ ಒಳ್ಳೆಯದನ್ನೇ ಮಾಡಬೇಕು ಎನ್ನುವುದು ವೇದಗಳ ಸಾರ ಎಂದು ವಿದ್ವಾಂಸ ರಾಮಮೂರ್ತಿ ಶ್ರೌತಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸಂಸ್ಕೃತಭಾರತೀ ಆಯೋಜಿಸಿದ್ದ ಸಂಸ್ಕೃತೋತ್ಸವದಲ್ಲಿ ಮಾತನಾಡಿ, ಆತ್ಮಕಲ್ಯಾಣವನ್ನು ಬೋಧಿಸುವ ಅನೇಕ ಉಪದೇಶಗಳು ವೇದಗಳಲ್ಲಿ ಇವೆ. ಎಲ್ಲರೂ ಸುಖದಿಂದ ಇರಲಿ. ಎಲ್ಲರೂ ಆರೋಗ್ಯವಂತರಾಗಲಿ, ಯಾರೂ ದುಃಖಿತರಾಗಬಾರದು ಎಂದು ಬಯಸುವ ಬೋಧನೆಗಳು ಸನಾತನ ಸಂಸ್ಕೃತಿಯಲ್ಲಿದೆ. ವಿದ್ಯೆ ಕಲಿಯಬೇಕಾದರೆ ಪರಿಶ್ರಮ ಅಗತ್ಯ. ಸುಖನಿದ್ದೆ ಬಿಡಬೇಕು. ಅತಿಯಾದ ನಿದ್ದೆ ವಿದ್ಯಾರ್ಥಿಗೆ ಶತ್ರು ಎಂದು ಕಿವಿಮಾತು ಹೇಳಿದರು.
ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಸಂಸ್ಕೃತ ವಿಷಯದಲ್ಲಿ 100 ಅಂಕಗಳನ್ನು ಪಡೆದ ಶೃಂಗೇರಿ ಮತ್ತು ಕೊಪ್ಪ ತಾಲೂಕಿನ 41 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಶೃಂಗೇರಿ ಸಂಸ್ಕೃತಭಾರತೀ ಅಧ್ಯಕ್ಷ ಡಾ. ಮಹೇಶ ಕಾಕತ್ಕರ್ ಮಾತನಾಡಿ, ಸಂಸ್ಕೃತ ಭಾಷೆಯ ಪ್ರಸಾರ ಪ್ರಚಾರಗಳಿಗಾಗಿ ಸಂಸ್ಥೆ ಅವಿರತವಾಗಿ ಶ್ರಮಿಸುತ್ತಿದೆ. ಸರಳ ಭಾಷೆಯಾದ ಸಂಸ್ಕೃತ ಮನೆ, ಮನೆಗಳನ್ನು ತಲುಪಬೇಕಿದೆ ಎಂದರು.
ವಿದ್ಯಾರಣ್ಯಪುರದ ಶ್ರೀ ಗುರುದತ್ತ ವೇದವಿದ್ಯಾ ಗುರುಕುಲದ ವಿದ್ಯಾರ್ಥಿಗಳಿಂದ ಸಂಸ್ಕೃತ ನಾಟಕ ಪ್ರದರ್ಶನ, ಸಂಸ್ಕೃತ ಸುಭಾಷಿತಗಳ ವಿವರಣೆ ಮತ್ತು ಭಗವದ್ಗೀತಾ ವಾಚನ ಮುಂತಾದ ಕಾರ್ಯಕ್ರಮಗಳು ನಡೆದವು. ಮಠದ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಾಠಶಾಲೆ ಅಧೀಕ್ಷಕ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪ ಸಂಸ್ಕೃತ ಭಾರತೀ ಅಧ್ಯಕ್ಷ ರಾಘವೇಂದ್ರ ಭಟ್ , ವಿದ್ವಾಂಸ ಆರೊಳ್ಳಿ ರಾಘವೇಂದ್ರ ಭಟ್, ಲಕ್ಷ್ಮೀನಾರಾಯಣ ಭಟ್, ನಾಗೇಶ್ ಕಾಮತ್ ಇದ್ದರು.