

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಎಲ್ಲ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ವಾರದಲ್ಲಿ ಕನಿಷ್ಠ 2 ದಿನ ವಿಶೇಷ ಸ್ವಚ್ಛತೆ ಅಭಿಯಾನ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸೂಚಿಸಿದರು.
ನಗರ ಸ್ವಚ್ಛತೆ ಹಾಗೂ ಘನ ತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳ ಪಾಲನೆ ಕುರಿತು ಹುಬ್ಬಳ್ಳಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ ಹಾಗೂ ರಾತ್ರಿ ಹೊತ್ತಿನಲ್ಲಿ ಸ್ವೀಪಿಂಗ್ ಯಂತ್ರಗಳನ್ನು ನಿಯೋಜಿಸಿ ರಸ್ತೆ ಸ್ವಚ್ಛತೆಗೆ ಅಗತ್ಯ ಕ್ರಮ ವಹಿಸಬೇಕು. ಪೌರಾ ಕಾರ್ವಿುಕರ ಹಾಜರಾತಿ, ಆರ್ಎಫ್ಐಡಿ ಟ್ಯಾಗ್ ರೀಡಿಂಗ್, ಆಟೋ ಟಿಪ್ಪರ್ಗಳ ಕಾರ್ಯನಿರ್ವಹಣೆಯ ಲಾಗ್ ಬುಕ್ಸ್ ಹಾಗೂ ಅಗತ್ಯ ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದರು.
ಮನೆ ಮನೆಯಿಂದ ಕಸ ಸಂಗ್ರಹಿಸುವಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸಬೇಕು. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿಯೇ ಸಂಗ್ರಹಿಸಬೇಕು. ಮನೆ, ವಾಣಿಜ್ಯ ಮಳಿಗೆ, ಕಾಂಪ್ಯಾಕ್ಟರ್ ಸ್ಟೇಷನ್ ಹಾಗೂ ಡಂಪಿಂಗ್ ಯಾರ್ಡ್ಗಳಲ್ಲಿ ಮಿಶ್ರ ಕಸ ಸ್ವೀಕೃತಿ ಆಗದಂತೆ ಕಾರ್ಯನಿರ್ವಾಹಕ ಇಂಜಿನಿಯರ್ (ಘನತ್ಯಾಜ್ಯ ವಸ್ತು ನಿರ್ವಹಣೆ), ವಲಯ ಕಚೇರಿ ಅಧಿಕಾರಿಗಳು, ಪರಿಸರ ಇಂಜಿನಿಯರ್ ಹಾಗೂ ಆರೋಗ್ಯ ನಿರೀಕ್ಷಕರು ಕ್ರಮ ಕೈಗೊಳ್ಳಬೇಕು. ಅನಧೀಕೃತವಾಗಿ ಕಸ ಚೆಲ್ಲುವವರಿಗೆ, ಮೂಲದಲ್ಲಿ ಕಸ ವಿಂಗಡಣೆ ಮಾಡದವರಿಗೆ ದಂಡ ವಿಧಿಸಲು ಸೂಚಿಸಿದರು.
ಬಳಕೆದಾರರ ಶುಲ್ಕ ಪರಿಷ್ಕರಣೆ
ಘನ ತ್ಯಾಜ್ಯ ವಸ್ತು ನಿರ್ವಹಣೆ, ಬಳಕೆದಾರರ ಶುಲ್ಕ ಪರಿಷ್ಕರಿಸಲು ಸಾಮಾನ್ಯ ಸಭೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹೋಟೆಲ್ ಹಾಗೂ ಇತರೆ ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರಿಂದ ಹೆಚ್ಚಿನ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲು ಸೂಕ್ತ ಕ್ರಮಕ್ಕೆ ವರದಿ ಸಲ್ಲಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್ (ಘವನಿ)ಗೆ ಸೂಚಿಸಿದರು.
ಪಾಲಿಕೆಯ ಕಾಂಪ್ಯಾಕ್ಟರ್ ಸ್ಟೇಷನ್ ಹಾಗೂ ಡಂಪಿಂಗ್ ಯಾರ್ಡ್ಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಅವಳಿ ನಗರದ ಸ್ವಚ್ಛತೆಯ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ್ ದಂಡಪ್ಪನವರ, ಉಪ ಆಯುಕ್ತ (ಕಂದಾಯ) ವಿಶ್ವನಾಥ್, ಉಪ ಆಯುಕ್ತ (ಆಡಳಿತ) ಆನಂದ ಕಲ್ಲೋಳಿಕರ್, ಇಇ ಮಲ್ಲಿಕಾರ್ಜುನ ಬಿ.ಎಂ., ಪರಿಸರ ಇಂಜಿನಿಯರ್ಗಳಾದ ನಯನಾ, ಯುವರಾಜ, ಅವಿನಾಶ, ವಲಯ ಕಚೇರಿ ಸಹಾಯಕ ಆಯುಕ್ತರು, ಆರೋಗ್ಯ ನಿರೀಕ್ಷಕರು ಇದ್ದರು.