ಸಹಕಾರಿ ಸಂಸ್ಥೆ ಜತೆ ವ್ಯವಹಾರ ನಡೆಸಿ

Do business with a cooperative
ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಮಾಜಿ ಶಾಸಕ ಆನಂದ ನ್ಯಾಮಗೌಡ ಉದ್ಘಾಟಿಸಿದರು.
Published on

ಜಮಖಂಡಿ: ಸಹಕಾರಿ ಸಂಸ್ಥೆಗಳ ಮೂಲಕ ರೈತರು ವ್ಯವಹಾರ ನಡೆಸಿದರೆ ಸಹಕಾರಿ ಸಂಸ್ಥೆಗಳ ಜತೆ ತಾವು ಕೂಡ ಆರ್ಥಿಕವಾಗಿ ಬೆಳೆಯಲು ಸಾಧ್ಯ ಎಂದು ಮಾಜಿ ಶಾಸಕ ಬಿಡಿಸಿಸಿ ನಿರ್ದೇಶಕ ಆನಂದ ನ್ಯಾಮಗೌಡ ಹೇಳಿದರು.

ತಾಲೂಕಿನ ಕಡಕೋಳ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

25 ಲಕ್ಷ ರೂ.ಗಳಿಂದ ಪ್ರಾರಂಭವಾದ ಈ ಸಂಸ್ಥೆ 16 ಕೋಟಿಗೂ ಅಧಿಕ ಬಂಡವಾಳ ಹೊಂದಿ ಹೆಮ್ಮರವಾಗಿ ಬೆಳೆದಿದೆ. ಬರುವ ದಿನಗಳಲ್ಲಿ ಈ ಸಂಸ್ಥೆಯಿಂದ ರೈತರಿಗೆ ಆರ್ಥಿಕ ಶಕ್ತಿ ತುಂಬುವ ಕಾರ್ಯ, ಯುವಕರಿಗೆ ಉದ್ಯೋಗ ಕಲ್ಪಿಸುವಂತಾಗಲಿ ಎಂದರು.

ಕಳೆದ 10 ವರ್ಷದಲ್ಲಿ ಈ ಸಂಸ್ಥೆ ಬೆಳೆಯಲು ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ ಪ್ರಾಮಾಣಿಕ ಸೇವೆಯೇ ಕಾರಣ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ ಮಾತನಾಡಿ, ತಾಲೂಕಿನಲ್ಲಿ ಪ್ರತಿಯೊಂದು ಸಹಕಾರಿ ಸಂಘ ಸಂಸ್ಥೆಗಳು ಅಭಿವೃದ್ಧಿಯತ್ತ ಸಾಗುತ್ತಿವೆ. ಈ ಸಂಘ ಸಂಸ್ಥೆಗಳು ರೈತರ ಹಿತ ಕಾಪಾಡುವಲ್ಲಿ ಮುಂದಾಗಿವೆ ಎಂದರು.

ಹಿರಿಯ ನ್ಯಾಯವಾದಿ ಎನ್.ಎಸ್.ದೇವರವರ ಮಾತನಾಡಿ, ಕಡಕೋಳ ಗ್ರಾಮ ಸಹಕಾರಿ ಕ್ಷೇತ್ರದಲ್ಲಿ ವಿನೂತನ ಹೆಜ್ಜೆ ಇಟ್ಟಿರುವುದು ಸಂತಸದ ಸಂಗತಿ. ರಾಜ್ಯದಲ್ಲಿ ಕೆಲ ಸಂಘ ಸಂಸ್ಥೆಗಳು, ಸಹಕಾರಿ ಸಂಘದ ಸಕ್ಕರೆ ಕಾರ್ಖಾನೆಗಳು ನಿಷ್ಕ್ರಿಯವಾಗಿವೆ. ಆದರೆ, ಈ ಭಾಗದಲ್ಲಿ ಸಹಕಾರಿ ಕ್ಷೇತ್ರದ ಸಂಘ ಸಂಸ್ಥೆಗಳು, ಕಾರ್ಖಾನೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸಂಘ, ಸಂಸ್ಥೆಗಳ ಅಭಿವೃದ್ಧಿಗಾಗಿ ಲಾಬಿ ಮಾಡಬೇಕು ವಿನಾ ಹುದ್ದೆಗೆ ಪೈಪೋಟಿ ಮಾಡಬಾರದು. ಬರುವ ದಿನಗಳಲ್ಲಿ ಮಲ್ಟಿಪಲ್ ಸಹಕಾರಿ ಸಂಘವಾಗಿ ಪರಿವರ್ತನೆ ಮಾಡಬೇಕು ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಓಲೆಮಠದ ಡಾ.ಚನ್ನಬಸವ ಸ್ವಾಮೀಜಿ ಮಾತನಾಡಿ, ಸಹಕಾರವೇ ಸ್ವರ್ಗ ಸಹಕಾರ ಚೆನ್ನಾಗಿದ್ದರೆ ಗ್ರಾಮ, ಸಂಘ-ಸಂಸ್ಥೆಗಳು ಅಭಿವೃದ್ಧಿ ಹೊಂದುತ್ತವೆ. 1905ರಲ್ಲಿ ಪ್ರಾರಂಭವಾದ ಸಹಕಾರ ಸಂಘ ಸಂಸ್ಥೆಗಳು ಉತ್ತರ ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆದು ಎಲ್ಲ ವರ್ಗಕ್ಕೂ ಆರ್ಥಿಕ ಸಹಾಯ ನೀಡುವುದರ ಜತೆಗೆ ಸ್ವಾವಲಂಬಿ ಜೀವನ ನಡೆಸುವಲ್ಲಿ ಇವುಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.

ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು, ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಕಾಡಪ್ಪ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.

ಬೀಳಗಿ ಶಾಸಕ ಜೆ.ಟಿ. ಪಾಟೀಲ ಸಂಘದ ಕಟ್ಟಡ ಉದ್ಘಾಟಿಸಿದರು. ಬಿಡಿಸಿಸಿ ನಿರ್ದೇಶಕ ಏಗಪ್ಪ ಸವದಿ ಗೊಬ್ಬರ ಗೋಡಾವನ್ ಉದ್ಘಾಟಿಸಿದರು. ಸಹಕಾರಿ ಧುರೀಣ ಅರುಣಕುಮಾರ ಶಹಾ ವ್ಯಾಪಾರ ಮಳಿಗೆ ಉದ್ಘಾಟಿಸಿದರು.

ಅರ್ಬನ್ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಮನಗೂಳಿ, ನಿಂಗಪ್ಪ ಕಡಪಟ್ಟಿ, ಫಕೀರಸಾಬ ಬಾಗವಾನ, ಧರೆಪ್ಪ ತೇಲಿ, ಈಶ್ವರ ಕರಬಸನವರ, ಎನ್.ಜಿ.ದಡ್ಡಿಮನಿ, ಸಂಗಪ್ಪ ದೇವರವರ, ಸಂಗಪ್ಪ ದಡ್ಡಿಮನಿ, ಅರ್ಜುನ ದಳವಾಯಿ, ತಾಲೂಕು ನಿಯಂತ್ರಣಾಧಿಕಾರಿ ವಿ.ಎಸ್.ಲೆಕ್ಕದ, ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಎಂ. ಗುಣಕಿ, ಕ್ಷೇತ್ರ ಸಿಬ್ಬಂದಿ ಪ್ರತಿಭಾ ಮಹಾಂತ, ಪಿಕೆಪಿಎಸ್ ನೌಕರರ ಸಂಘದ ಅಧ್ಯಕ್ಷ ಅಶೋಕ ಬಾಡಗಿ, ಎಂ.ಪಿ.ಕಡಕೋಳ, ಶ್ರೀಮತಿ ಚನಾಳ, ಅಪ್ಪಾಸಾಬ ದೇವರವರ, ನಾಗಪ್ಪ ಮುತ್ತಕ್ಕನವರ ಇತರರು ಇದ್ದರು.

ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಪ್ಪಣ್ಣ ಮುತ್ತಕ್ಕನವರ ಸ್ವಾಗತಿಸಿದರು. ಶಿಕ್ಷಕಿ ಕೆ.ಕೆ.ರಾಮದುರ್ಗ, ಉಪನ್ಯಾಸಕ ಸಂಜೀವಕುಮಾರ ಆರ್. ನಿರೂಪಿಸಿದರು. ದೀಪಾ ಜಾಬಗೌಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net