

ಬನ್ನಿಕುಪ್ಪೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಹುಣಸೂರು ತಾಲೂಕಿನ ಸೋನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ಮಣ್ಣಿನ ಸಂರಕ್ಷಣೆ ಹೈನುಗಾರಿಕೆ ಅರಣ್ಯ ಕೃಷಿ ಕುರಿತು ಒಂದು ದಿನದ ರೈತ ಕೃಷಿ ಕ್ಷೇತ್ರ ಪಾಠಶಾಲೆ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಪ್ರಗತಿಪರ ಅರಗು ಸಾವಯುವ ಕೃಷಿಕ ಚಲುವರಾಜು, ಡೇರಿ ಅಧ್ಯಕ್ಷ ಭಾಗ್ಯಮ್ಮ ಉದ್ಘಾಟಿಸಿದರು.
ಸಾವಯವ ಕೃಷಿಕ ಚಲುವರಾಜು ಮಾತನಾಡಿ, ಮಣ್ಣು, ತಾಯಿ, ಪ್ರಕೃತಿ ಈ ಮೂರೂ ಇದ್ದರೆ ಮಾತ್ರ ಈ ಭೂಮಿಯ ಮೇಲೆ ನಮಗೆ ಜೀವಿಸಲು ಸಾಧ್ಯ. ನಾವು ಮೊದಲು ಯಾವುದೇ ಕೃಷಿಯನ್ನು ಮಾಡುವುದಕ್ಕೆ ಮುಂಚೆ ಮಣ್ಣಿನ ಪರೀಕ್ಷೆಯನ್ನು ಮಾಡುವುದು ಒಳಿತು. ಕಾರಣ ಭೂಮಿಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಭೂಮಿಗೆ ಬೇಕಾಗುವ ಒಳ್ಳೆಯ ಗೊಬ್ಬರ ನೀರು, ವಾತಾವರಣ ಇರುವುದಿಲ್ಲ. ಕಾರಣ ನಾವುಗಳು ಕೃಷಿಯನ್ನು ಅವಲಂಬಿಸಿ ಭೂಮಿ ತಾಯಿಗೆ ಗೊಬ್ಬರದ ಮೂಲಕ ವಿಷವನ್ನು ಹಾಕುತ್ತಿದ್ದೇವೆ. ಅದೇ ವಿಷ ಆಹಾರ ತಿಂದ ನಮಗೂ ಪ್ರಾಣಿ-ಪಕ್ಷಿಗಳಿಗೂ ನಾನ ರೀತಿಯ ಕಾಯಿಲೆಗಳು ಬರಲು ಸಾಧ್ಯವಾಗುತ್ತದೆ. ರೈತರು ಯಾವುದೇ ಕೃಷಿಯನ್ನು ಅವಲಂಬಿಸಿ ಅದಕ್ಕೆ ಬೇಕಾಗುವಷ್ಟು ಕೊಟ್ಟಿಗೆ ಗೊಬ್ಬರ ಸೊಪ್ಪಿನ ಗೊಬ್ಬರ ಸಾವಯವ ಗೊಬ್ಬರಗಳನ್ನು ಬಳಸುತ್ತಿಲ್ಲ. ವಿಷಪೂರಿತ ಗೊಬ್ಬರಗಳನ್ನು ಬಳಸುವುದರಿಂದ ಭೂಮಿ ಹಾಳಾಗುವುದು ಮತ್ತು ಬರ, ಪ್ರಕೃತಿ ವಿಕೋಪ, ಬೆಳೆ ನಷ್ಟ, ಪರಿಸರ ಉಳಿವಿಲ್ಲ. ರೈತರ ಆರೋಗ್ಯವು ಹಾಳಾಗಿ ಆರ್ಥಿಕ ಪರಿಸ್ಥಿತಿಯು ಸುಧಾರಣೆ ಆಗುವುದಿಲ್ಲ. ಹಾಗಾಗಿ ರೈತರು ಯಾವುದೇ ಕೃಷಿಯನ್ನು ಮಾಡುವುದಕ್ಕೆ ಮುಂಚೆ ಮಣ್ಣಿನ ಪರೀಕ್ಷೆ ಮಾಡಿಸುವುದು ಒಳ್ಳೆಯದು ಎಂದರು.
ಮಣ್ಣನ್ನು ಕಾಪಾಡಿದರೆ ನಿಮ್ಮ ಮುಂದಿನ ಪೀಳಿಗೆಯ ಆರೋಗ್ಯಕರ ಸಮಾಜವನ್ನು ನೋಡಬಹುದು. ಹೈನುಗಾರಿಕೆಯಲ್ಲಿ ಹಸುಗಳ ತಳಿಯನ್ನು ಗುರುತಿಸಿ ಅವುಗಳಿಗೆ ಬೇಕಾದ ಹಸಿರು ಎಲೆ ಸೊಪ್ಪುಗಳನ್ನು ಹಾಗೂ ಪೋಷಕಾಂಶ ಸಸ್ಯಗಳನ್ನು ಭೂಮಿಯಲ್ಲಿ ನಾವು ಉಪಯೋಗಿಸುವ ಒಳ್ಳೆಯ ಆಹಾರದಂತೆ ಅವುಗಳನ್ನು ಕಾಪಾಡಿಕೊಂಡರೆ ಹೈನುಗಾರಿಕೆಯಲ್ಲಿ ಆರ್ಥಿಕ ಅಭಿವೃದ್ಧಿ ಹೊಂದಬಹುದು ಎಂದು ತಿಳಿಸಿದರು.
ಮೇಲ್ವಿಚಾರಕಿ ನಜೀಮಾ ಮಾತನಾಡಿ, ಸಂಘದಲ್ಲಿ ದೊರೆಯ ಬಹುದಾದಂತಹ ಸಾಲ ಸೌಲಭ್ಯ, ಹಣದ ಹೂಡಿಕೆ, ಸುಲಭ ಕಂತುಗಳ ಬಗ್ಗೆ ತಿಳಿಸಿದರು.
ಕೃಷಿ ಮೇಲ್ವಿಚಾರಕ ಶಿವಶಂಕರ್ ಮಾತನಾಡಿ, ಸಂಸ್ಥೆಯಿಂದ ಸಿಗಬಹುದಾದ ಕೃಷಿ ಸ್ವಯಂ ಉದ್ಯೋಗ ಅಪಘಾತ ವಿಮೆ ಜೀವ ವಿಮೆ ತರಬೇತಿಗಳು ಮುಂತಾದವುಗಳ ಬಗ್ಗೆ ವಿಶ್ಲೇಷಣೆ ನೀಡಿದರು. ಸಂಘದ ಸೇವಾ ಪ್ರತಿನಿಧಿ ವಿನುತಾ ಹಾಗೂ ಆ ಭಾಗದ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು.