

ಸಿದ್ದಾಪುರ: ಎರಡರಿಂದ ಮೂರು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿ ಅದರಲ್ಲಿ ಕೊರತೆ ಇರುವ ಪೋಷಕಾಂಶ ಹಾಗೂ ಹಸಿರೆಲೆ ಗೊಬ್ಬರವನ್ನು ಮಣ್ಣಿಗೆ ನೀಡುವ ಮೂಲಕ ಭೂಮಿಯ ಫಲವತ್ತತೆ ಹೆಚ್ಚಿಸಿ ಉತ್ತಮ ಬೆಳೆಯಿಂದ ಅಧಿಕ ಲಾಭ ಪಡೆಯಬಹುದು ಎಂದು ಕೃಷಿ ಇಲಾಖೆ ನಿವೃತ್ತ ಕೃಷಿ ಅಧಿಕಾರಿ ಐ.ಕೆ. ನಾಯ್ಕ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಿದ್ದಾಪುರ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಸವಂತೆ ಆಶ್ರಯದಲ್ಲಿ ಹಸವಂತೆಯ ಸಭಾಭವನದಲ್ಲಿ ಮಣ್ಣು ಪರೀಕ್ಷೆ ಮತ್ತು ಹಸಿರೆಲೆ ಗೊಬ್ಬರ ತಯಾರಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ರೈತರು ಪ್ರತಿ ವರ್ಷ ಒಂದೇ ಬೆಳೆ ಬೆಳೆಯದೇ ವರ್ಷದಿಂದ ವರ್ಷಕ್ಕೆ ಬೆಳೆ ಬದಲಾವಣೆ ಮಾಡಿ ಬೆಳೆದರೆ ಉತ್ತಮ ಇಳುವರಿ ತೆಗೆಯಬಹುದು ಎಂದರು.
ಒಕ್ಕೂಟದ ಉಪಾಧ್ಯಕ್ಷ ಧನಂಜಯ ನಾಯ್ಕ, ಪ್ರಗತಿಪರ ಕೃಷಿಕ ಸಂಭೂತ ನಾಯ್ಕ, ಲಕ್ಷ್ಮೀ ನಾಯ್ಕ, ಊರ ಕಮಿಟಿ ಸದಸ್ಯ ಸುಧಾಕರ ನಾಯ್ಕ, ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಯೋಜನೆಯ ಮೇಲ್ವಿಚಾರಕಿ ಪೂರ್ಣಿಮಾ, ಸೇವಾಪ್ರತಿನಿಧಿ ಮಂಜಪ್ಪ ಹಾಗೂ ಕೃಷಿ ಮೇಲ್ವಿಚಾರಕ ಮಹಾದೇವ ಬಿ. ಕಾರ್ಯಕ್ರಮ ನಿರ್ವಹಿಸಿದರು.