ಎಸ್‌ಐಟಿಯಿಂದ ಡಿಎನ್‌ಎ ಪರೀಕ್ಷೆ ಅವಶೇಷ ರವಾಣೆ

Published on

ಮಂಗಳೂರು: ಧರ್ಮಸ್ಥಳ ಸಮೀಪದ ಬಂಗ್ಲೆಗುಡ್ಡದಲ್ಲಿ ಮಹಜರು ವೇಳೆ ಏಳು ತಲೆ ಬುರುಡೆ, ಅಸ್ಥಿಪಂಜರದ ಕುರುಹು ಪತ್ತೆಯಾದ ವಿಚಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲು ವಿಶೇಷ ತನಿಖಾ ತಂಡ(ಎಸ್‌ಐಟಿ) ಸಿದ್ಧತೆ ನಡೆಸಿದೆ. ಒಂದು ಶವದ ಬಳಿ ಗುರುತಿನ ಚೀಟಿ ದೊರೆತ ಹಿನ್ನೆಲೆಯಲ್ಲಿ ಅದನ್ನು ಹೊರತುಪಡಿಸಿ ಉಳಿದ ಶವಗಳ ಗುರುತು ಪತ್ತೆಯಾಗಬೇಕಾಗಿದೆ. ಇದಕ್ಕಾಗಿ ಪತ್ತೆಯಾದ ಅವಶೇಷಗಳನ್ನು ಎಸ್‌ಐಟಿ ತಂಡ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಿದೆ.

ಬಂಗ್ಲೆಗುಡ್ಡ ಕಾಡಿನಲ್ಲಿ ಅಸಹಜ ಸಾವುಗಳ ಕುರಿತು ಎಸ್‌ಐಟಿ ದೂರು ದಾಖಲಿಸಲಿದೆ. ಅಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿತ್ತು. ಈ ಅಸ್ಥಿಪಂಜರಗಳು ಯಾರದ್ದು ಎಂದು ಗುರುತು ಪತ್ತೆಗೆ ಎಸ್‌ಐಟಿ ದೂರು ದಾಖಲಿಸಲಿದೆ. ಒಂದು ಅಸ್ಥಿಪಂಜರ ಕೊಡಗು ಮೂಲದ ಅಯ್ಯಪ್ಪರದ್ದು ಎಂಬುದು ಬಹುತೇಕ ಖಚಿತಗೊಂಡಿದೆ. ಕೊಡಗಿನ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ.ಅಯ್ಯಪ್ಪ ಅವರ ಪುತ್ರ ಜೀವನ್ ಶನಿವಾರ ಬೆಳ್ತಂಗಡಿ ಎಸ್‌ಐಟಿ ಠಾಣೆಗೆ ಆಗಮಿಸಿದ್ದಾರೆ. ಬಂಗ್ಲೆಗುಡ್ಡ ಮಹಜರಿನಲ್ಲಿ ಪತ್ತೆಯಾದ ತಲೆಬುರುಡೆ ಮತ್ತು ಅಸ್ಥಿಪಂಜರದ ಜಾಗದಲ್ಲಿ ಅಯ್ಯಪ್ಪನ ಗುರುತಿನ ತೀಟಿ ಮತ್ತು ವಾಕಿಂಗ್ ಸ್ಟಿಕ್ ಪತ್ತೆಯಾಗಿತ್ತು. ಜೀವನ್‌ರಿಂದ ತಂದೆಯ ನಾಪತ್ತೆ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಎಸ್‌ಐಟಿ ಕಲೆ ಹಾಕಲಿದೆ.

*ಅವಹೇಳನ ವಿರುದ್ಧ ದೂರು:

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಧರ್ಮಸ್ಥಳದ ಮೂವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಹಿನ್ನೆಲೆಯಲ್ಲಿ ಗ್ರಾಮಸ್ಥ ಎ.ಸಿ. ಚಂದ್ರ ಎಂಬವರು ಎಸ್‌ಐಟಿಗೆ ದೂರು ನೀಡಿದ್ದಾರೆ.

ಕುಸುಮಾವತಿ, ಪತಿ ಚಂದಪ್ಪನನ್ನು ಸ್ಲೋ ಪಾಯಿಸನ್ ನೀಡಿ ಸಾಯಿಸಿದ್ದಾರೆ ಎಂದು ಹೇಳಿದ್ದಾರೆ ಎನ್ನುವ ವಿಚಾರದ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ. ಸೌಜನ್ಯ ಸಾವಿನ ನಂತರ ಧರ್ಮಸ್ಥಳದ ಮೂವರ ವಿರುದ್ಧ ಆರೋಪ ಮಾಡಲಾಗಿತ್ತು. ನಂತರ ಎಲ್ಲ ತನಿಖೆಗೆ ಒಳಪಟ್ಟು ಮೂವರಿಗೆ ಕ್ಲೀನ್‌ಚಿಟ್ ಸಿಕ್ಕಿದೆ. ಆದರೆ ಈಗಲೂ ಮೂವರನ್ನು ಅವಮಾನಿಸುವ ಕೆಲಸ ನಡೆಯುತ್ತಿದೆ. ಅವರಿಗೂ ಅಕ್ಕ ತಂಗಿಯರು ಇದ್ದಾರೆ, ಇದರಿಂದ ಬಹಳ ಸಮಸ್ಯೆ ಆಗುತ್ತಿದೆ. ಇದಷ್ಟೇ ಅಲ್ಲದೆ ಕುಸುಮಾವತಿ ಪತಿ ಚಂದಪ್ಪ ಅವರು ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಆದರೆ ಕುಸುಮಾವತಿ ಅವರು ಪತಿಯನ್ನು ಸ್ಲೋ ಪಾಯಿಸನ್ ನೀಡಿ ಧರ್ಮಸ್ಥಳ ಭಾಗದವರು ಕೊಂದಿದ್ದಾರೆ ಎಂದು ಹೇಳಿದ್ದಾರೆ. ಇದು ವಿನಾ ಕಾರಣ ಆರೋಪವಾಗಿದೆ. ಹಾಗಾಗಿ ಇದನ್ನು ಸರಿಯಾಗಿ ತನಿಖೆ ಮಾಡಬೇಕು ಎಂದು ದೂರು ನೀಡಲಾಗಿದೆ. ದೂರಿಗೆ ಪೂರಕ ದಾಖಲೆಯನ್ನು ಒದಗಿಸಿದ್ದೇವೆ ಎಂದು ಚಂದ್ರ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net