

ಕಲಬುರಗಿ : ಗಣಿಗಾರಿಕೆಯಿಂದ ನೇರವಾಗಿ ಬಾಧಿತವಾಗುವ ಪ್ರದೇಶಕ್ಕೆ ಡಿ.ಎಂ.ಎಫ್. ಅನುದಾನ ಹೆಚ್ಚು ಪ್ರಮಾಣದಲ್ಲಿ ಸದ್ಬಳಕೆ ಆಗಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸೋಮವಾರ ಇಲ್ಲಿನ ಡಿ.ಸಿ. ಕಚೇರಿಯಲ್ಲಿ ಸಭಾಂಗಣದಲ್ಲಿ ಮುಜರಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನದ ಸಭೆ ನಡೆಸಿ ಮಾತನಾಡಿದರು.
ಕಳೆದ 2020-21ನೇ ಸಾಲಿನಲ್ಲಿ ಗಣಿಗಾರಿಕೆ ಬಾಧಿತ ನೇರ ಪ್ರದೇಶಗಳಿಗೆ 5,093 ಲಕ್ಷ ರೂ, ಇತರೆ ಪ್ರದೇಶಗಳಿಗೆ 7,225 ಲಕ್ಷ ರೂ.ಅನುದಾನ ಅವೈಜ್ಞಾನಿಕ ಹಂಚಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಚಿತ್ತಾಪುರ, ಸೇಡಂ, ಚಿಂಚೋಳಿ, ಶಹಾಬಾದ ತಾಲೂಕುಗಳು ನೇರವಾಗಿ ಗಣಿಗಾರಿಕೆಯಿಂದ ಭಾದಿತವಾಗುವ ತಾಲುಕುಗಳಿವೆ. ಇಲ್ಲಿ ಡಿ.ಎಂ.ಎಫ್. ನಿಧಿ ಹೆಚ್ಚು ಬಳಕೆಯಾಗಬೇಕು ಎಂದರು.
ನೇರವಾಗಿ ಭಾಧಿತ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿರುತ್ತದೆ. ಶ್ರಮಿಕ ವರ್ಗ ಅಲ್ಲಿ ವಾಸ ಮಾಡುತ್ತಾರೆ. ಅ ಶ್ರಮಿಕ ಸಮುದಾಯವರು ಮತ್ತು ಅವರ ಮಕ್ಕಳ ಶಿಕ್ಷಣ, ಅರೋಗ್ಯ ರಕ್ಷಣೆ, ಮೂಲಸೌಕರ್ಯ ಬಲಪಡಿಸುವುದು ನಮ್ಮ ಆದ್ಯತೆಯಾಗಬೇಕು. ಪರಿಸರ ಸಂರಕ್ಷಣೆ ಕಾಪಾಡಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ಅನುದಾನ ಆ ಪ್ರದೇಶಕ್ಕೆ ಮೀಸಲಿಡಬೇಕು ಎಂದರು.
ಅವೈಜ್ಞಾನಿಕವಾಗಿ ಬಾಧಿತ ಪ್ರದೇಶ ಇಲ್ಲದಲ್ಲಿ ಕಾಮಗಾರಿ ಕೈಗೊಳ್ಳಲು ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಇದೂವರೆಗೆ ಕಾಮಗಾರಿ ಆರಂಭಿಸದ ಕೆಲಸಗಳನ್ನು ಕೂಡಲೆ ತಾತ್ಕಲಿಕವಾಗಿ ನಿಲ್ಲಿಸಬೇಕು. ಈ ಎಲ್ಲಾ ಕಾಮಗಾರಿಗಳನ್ನು ಇಲಾಖಾವಾರು ಪರಿಶೀಲಿಸುವಂತೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರಿಗೆ ಸೂಚಿಸಿದರು.
ಮುಜರಾಯಿ ಇಲಾಖೆ ಚರ್ಚೆ ವೇಳೆ ಸಂದರ್ಭದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡದೆ, ಅನುದಾನ ಹಂಚಿಕೆ ಮಾಡಿರುವುದಕ್ಕೆ ಕೂಡಲೆ ಇದೆಲ್ಲ ತನಿಖೆ ಮಾಡುವಂತೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಸೂಚಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಅನುದಾನ ಪಡೆದು ಇದೂವರೆಗೆ ಕಾಮಗಾರಿ ಅರಂಭಿಸದ ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಅನುದಾನ ಪಡೆದಲ್ಲಿ ಕಾಲಮಿತಿಯಲ್ಲಿ ಕೆಲಸ ಮುಗಿಸಿ.ಇಲ್ಲದಿದ್ದಲೆ ಅನುದಾನ ವಾಪಸ್ ಮಾಡಿ ಎಂದು ಸಚಿವರು ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ ಸಿಂಗ್ ಮೀನಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಪ್ರವೀಣ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.