ದೇವೇಗೌಡರ ಮನೆಯಲ್ಲಿ ಡಿ.ಕೆ. ಶಿವಕುಮಾರ್ ಭೋಜನ!

DKshi-Web
Published on

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯ ಕೋರಲು ಸೋಮವಾರ ಅವರ ಮನೆಗೆ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಲ್ಲಿಯೇ ಭೋಜನ ಸ್ವೀಕರಿಸಬೇಕಾದ ಸಂದರ್ಭ ಅನಿವಾರ್ಯವಾಗಿ ಎದುರಾಯಿತು.

ಪ್ರತಿ ವರ್ಷ ತಮ್ಮ ಜನ್ಮದಿನದಂದು ತಿರುಪತಿಗೆ ತೆರಳುವ ದೇವೇಗೌಡರು ಈ ಸಲ ಕರೊನಾ ಲಾಕ್‌ಡೌನ್‌ನಿಂದಾಗಿ ಅಲ್ಲಿಗೆ ಹೋಗಿಲ್ಲ. ಬೆಂಗಳೂರಿನ ಪದ್ಮನಾಭ ನಗರದ ಮನೆಯಲ್ಲಿಯೇ ಇದ್ದಾರೆ. ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸದಿರುವಂತೆಯೂ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ದೇವೇಗೌಡರ ಕುಟುಂಬ ಮತ್ತು ಡಿ.ಕೆ. ಸಹೋದರರು ರಾಜಕೀಯವಾಗಿ ಬದ್ಧವೈರಿಗಳೆಂದೇ ಪರಿಗಣಿತರಾಗಿದ್ದಾರೆ. ಚುನಾವಣೆಗಳು ಬಂದಾಗಲಂತೂ ಈ ರಾಜಕೀಯ ಶತ್ರುತ್ವ ಮೇರೆ ಮೀರಿರುತ್ತದೆ. ವಾಗ್ದಾಳಿಗಳು ಸಾಮಾನ್ಯವಾಗಿರುತ್ತವೆ.

ರಾಜಕೀಯ ಸಂಬಂಧ ಹೀಗಿದ್ದರೂ ಇಂದು ಬೆಳಗ್ಗೆ ಡಿ.ಕೆ. ಶಿವಕುಮಾರ್ ಅವರು ದಿಢೀರನೆ ದೇವೇಗೌಡರ ಮನೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಮಾಜಿ ಪ್ರಧಾನಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಶುಭಾಶಯ ಕೋರಿದರು.

ಇದನ್ನು ದೇವೇಗೌಡರು ಕೂಡ ನಗುನಗುತ್ತಲೇ ಸಕಾರಾತ್ಮಕವಾಗಿ ಸ್ವೀಕರಿಸಿದರು. ಬೇರೆಡೆ ಹೋಗುವುದಿದೆಯೆಂದು ಎಷ್ಟು ಹೇಳಿದರೂ ಕೇಳದೆ ಶಿವಕುಮಾರ್ ಅವರನ್ನು ಕೈಹಿಡಿದು ಊಟಕ್ಕೆ ಕೂರಿಸಿದರು. ತಾವೂ ಹಸನ್ಮುಖರಾಗಿ ಪಕ್ಕದಲ್ಲೇ ಕುಳಿತು, ಅರ್ಧ ಗಂಟೆಗೂ ಹೆಚ್ಚು ಕಾಲ ಮನಬಿಚ್ಚಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net