

ಶಿವಮೊಗ್ಗ: ಹಿಂದುವಾಗಿ ಹುಟ್ಟಿರುವೆ. ಹಿಂದುವಾಗಿಯೇ ಸಾಯುತ್ತೇನೆ ಎಂದು ಹೇಳಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ನಿಜವಾದ ಹೀರೊ. ಅವರು ಸ್ವಾತಂತ್ರೃ ಪೂರ್ವದ ಕಾಂಗ್ರೆಸ್ ನಾಯಕರ ಆಶಯವನ್ನು ಈಗ ಅರಿತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮುಕ್ತಕಂಠದಿಂದ ಡಿಕೆಶಿ ಅವರನ್ನು ಹೊಗಳಿದರು.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದವರ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲಘುವಾಗಿ ಮಾತನಾಡಿದ್ದರು. ಆದರೆ ಡಿಕೆಶಿ ಅದೇ ಕುಂಭಮೇಳದಲ್ಲಿ ಕುಟುಂಬ ಸಮೇತರಾಗಿ ಪುಣ್ಯಸ್ನಾನ ಮಾಡಿದರು. ಇದು ಅವರಲ್ಲಿರುವ ಧಾರ್ಮಿಕ ಪ್ರಜ್ಞೆಗೆ ಸಾಕ್ಷಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸ್ವಾತಂತ್ರೃ ಪೂರ್ವದಲ್ಲಿ ಎಲ್ಲ ಕಾಂಗ್ರೆಸಿಗರು ನಿಜವಾಗಿಯೂ ಹಿಂದುಪರ ಒಲವು ಉಳ್ಳವರಾಗಿದ್ದರು. ಮಹಾತ್ಮ ಗಾಂಧೀಜಿ ಉಸಿರು ನಿಲ್ಲುವ ಮುನ್ನ ಹೇರಾಮ್ ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಬೇಕು. ಹಿರಿಯರು ಸ್ವಾತಂತ್ರೃಕ್ಕಾಗಿ ಹೋರಾಟ ಮಾಡಿದ್ದೇ ಇಲ್ಲಿನ ಧಾರ್ಮಿಕ ಕ್ಷೇತ್ರಗಳು, ಸನಾತನ ಪರಂಪರೆ ಉಳಿಸಿಕೊಳ್ಳುವ ಸಲುವಾಗಿ. ಈಗ ಡಿಕೆಶಿ ಹಿಂದುಪರ ಹೇಳಿಕೆ ನೀಡಿರುವುದು ನನಗೆ ಖುಷಿ ತಂದಿದೆ ಎಂದರು.
ರಾಜಕೀಯಕ್ಕಾಗಿ ಹಿಂದುಗಳನ್ನು, ಹಿಂದು ಧರ್ಮವನ್ನು ಅವಹೇಳನ ಮಾಡುವುದು ಸರಿಯಲ್ಲ. ಅದು ಯಾವ ರಾಜಕಾರಣಿಗೂ ಶೋಭೆ ತರುವುದಿಲ್ಲ. ಈಗ ಡಿ.ಕೆ.ಶಿವಕುಮಾರ್ ಹೇಳಿಕೆಯಲ್ಲಿ ರಾಜಕೀಯ ಕಾರಣಗಳನ್ನು ಹುಡುಕುವುದು ಸಲ್ಲದು ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.