

ಮಂಡ್ಯ: ಮೇಕೆದಾಟು ವಿಚಾರವಾಗಿ ಕಾನೂನು ಹೋರಾಟ ನಡೆಸಲಾಗುವುದು. ಈ ಸಂಬಂಧ ಪ್ರಧಾನಮಂತ್ರಿ, ಕೇಂದ್ರದ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಸಮಾಲೋಚಿಸಿದ್ದಾರೆ. ಆದರೆ, ನಮಗೆ ಅನುಮತಿ ಕೊಟ್ಟಿಲ್ಲ. ಆದ್ದರಿಂದ ನಮಗೆ ಕಾನೂನು ಇದ್ದು, ಅದೇ ರಕ್ಷಣೆ ಕೊಡಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕೆಆರ್‌ಎಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಮೇಕೆದಾಟು ಯೋಜನೆಗೆ ಡಿಎಂಕೆ ಒಪ್ಪಿಗೆ ಕೊಡಿಸಿದರೆ ಕೇಂದ್ರದಿಂದ ಅನುಮತಿ ಕೊಡಿಸುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರು ಅನುಮತಿ ಕೊಡಿಸುವ ಅವಶ್ಯಕತೆ ಇಲ್ಲ. ಮೊದಲು ಅಧಿಕಾರಕ್ಕೆ ಬಂದ 5 ನಿಮಿಷದಲ್ಲಿ ಅನುಮತಿ ಕೊಡಿಸುತ್ತೇನೆ ಎಂದಿದ್ದರು. ಈಗ ಆ ರೀತಿ ಹೇಳಲು ನಾನೇನು ಮೂರ್ಖನಾ ಎನ್ನುತ್ತಿದ್ದಾರೆ. ಅವರ ಬುಡಬುಡಕೆ ಮಾತು, ಯೂಟರ್ನ್ ಮಾತುಗಳನ್ನು ನೋಡಿದ್ದೇನೆ ಎಂದು ವ್ಯಂಗ್ಯವಾಡಿದರು.
ಅವರು ಎಂದೂ ರೈತರ ಪರವಾಗಿ ನಿಂತಿಲ್ಲ. ಬರೀ ಖಾಲಿ ಮಾತು. ಹೊಸದಾಗಿ ಪಂಚೆ ಕಟ್ಟಿದ್ದು ಬಿಟ್ಟರೆ ರೈತರ ಪರ ನಿಂತ ಒಂದೇ ಒಂದು ಉದಾಹರಣೆ ಇಲ್ಲ. ಇದ್ದರೆ ದಾಖಲೆ ಸಹಿತ ತೋರಿಸಲಿ. ಈಗ 10 ಸಾವಿರ ಜನರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿದ್ದಾರೆ. ಅದನ್ನು ಮಾಡಲಿ. ನಮ್ರತೆಯಿಂದ ಅವರನ್ನು ಅಭಿನಂದಿಸುತ್ತೇನೆ. ಕಾವೇರಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಕಾನೂನಿನ ಶಕ್ತಿ ಇದೆ. ನಮ್ಮ ಲೆಕ್ಕದ ಪ್ರಕಾರ 71 ಟಿಎಂಸಿಯಷ್ಟು ನೀರು ಸಮುದ್ರದ ಪಾಲಾಗಿದೆ. ಆದರೆ, ನಮ್ಮ ಮೇಕೆದಾಟು ಅಣೆಕಟ್ಟಿನ ಸಾಮರ್ಥ್ಯ ಕೇವಲ 66 ಟಿಎಂಸಿ. ಇಷ್ಟು ನೀರು ಸಂಗ್ರಹಕ್ಕೆ ಅನುಮತಿ ಸಿಕ್ಕರೆ ಸಾಕು. ಇದರಿಂದ ಸಮುದ್ರಕ್ಕೆ ಹೋಗುತ್ತಿರುವ ಹೆಚ್ಚುವರಿ ನೀರನ್ನು ಸಂಗ್ರಹಿಸಿಕೊಅಡು ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ನನ್ನನ್ನು ಸಿಡಿ ಶಿವು ಎಂದು ಕರೆದಿದ್ದಾರೆ. ಹೌದು, ನಾನು ಇಂದಿರಾ ಹೆಸರಿನಲ್ಲಿ ಚಿತ್ರಮಂದಿರ ಹೊಂದಿದೆ. ಎಚ್‌ಡಿಕೆ ಬಗ್ಗೆ ಮಾತನಾಡಿದ್ದಕ್ಕೆ ನಿಖಿಲ್ ಕುಮಾರಸ್ವಾಮಿ ನನ್ನ ಟೀಕಿಸಿದ್ದಾರೆ. ನಾನು ರಾಜಕಾರಣ ಶುರು ಮಾಡಿದಾಗ ಆತ ಹುಟ್ಟೇ ಇರಲಿಲ್ಲ ಎಂದು ಟಾಂಗ್ ನೀಡಿದರು.