

ತಿಪಟೂರು ; ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಇಂಧನ ಬೆಲೆ ಹೆಚ್ಚಳವಾದಾಗ ಸೈಕಲ್ ತುಳಿದು ಪ್ರತಿಭಟಿಸಿದ್ದ ಬಿಜೆಪಿ ನಾಯಕರ ಹೋರಾಟ, ಛಲ ಏನಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.
ಕೆ.ಬಿ. ಕ್ರಾಸ್‌ನಲ್ಲಿ ಭಾನುವಾರ ತೈಲಬೆಲೆ ಹೆಚ್ಚಳ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ‌್ಯಾಲಿಯಲ್ಲಿ ಮಾತನಾಡಿದ ಅವರು ಈಗ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸೆಂಚುರಿ ಬಾರಿಸಿದೆ. ಅಂದು ಯುಪಿಎ ಸರ್ಕಾರವನ್ನು ಹೇಗೆಲ್ಲಾ ಟೀಕಿಸಿದ್ದ ಸಿಎಂ ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಹಾಗೂ ಸಂಸದೆ ಶೋಭಾಕರಂದ್ಲಾಜೆ ಅದನ್ನೊಮ್ಮೆ ನೆನಪು ಮಾಡಿಕೊಳ್ಳಬೇಕು. ಈಗ ಕಾಂಗ್ರೆಸ್ ಅದೇ ಹೋರಾಟದ ಹಾದಿಯಲ್ಲೇ ಸಾಗುತ್ತಿರುವುದಾಗಿ ಹೇಳಿದರು.
ಬಿಜೆಪಿ ಸರ್ಕಾರಗಳ ಆಡಳಿತದಲ್ಲಿ ಉದ್ಯಮಿಗಳು, ವರ್ತಕರು, ಮಧ್ಯಮ ವರ್ಗದವರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಉದ್ದಿಮೆದಾರರು ಸೇರಿ ಎಲ್ಲರೂ ಅಂಗೈಯಲ್ಲಿ ಜೀವ ಹಿಡಿದು ಜೀವನ ನಡೆಸುವ ಸ್ಥಿತಿ ಇದೆ. ಸರ್ಕಾರದ ದೌರ್ಬಲ್ಯಗಳ ವಿರುದ್ಧ ಜನರಿಗೆ ಈಗ ಜ್ಞಾನೋದಯವಾಗಿದೆ. ಇವರ ಹೋರಾಟಕ್ಕೆ ಕಾಂಗ್ರೆಸ್ ಎಂದಿಗೂ ಬೆಂಬಲವಾಗಿ ನಿಲ್ಲುತ್ತದೆ. ಲಾಕ್‌ಡೌನ್, ಸೀಲ್‌ಡೌನ್, ಬ್ರೇಕ್‌ಡೌನ್‌ನಿಂದ ಎಷ್ಟೆಲ್ಲ ಜನ ಸತ್ತರು, ಎಷ್ಟು ಯುವಕರು ಉದ್ಯೋಗ ಕಳೆದುಕೊಂಡರು ಎಂಬ ಬಗ್ಗೆ ಸರ್ಕಾರ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮುರಳೀಧರ ಹಾಲಪ್ಪ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆ ಮಠ, ಮುಖಂಡರಾದ ನಿಖಿಲ್, ಗೀತಾರಾಜಣ್ಣ, ಆದಿತ್ಯ ಜಯಣ್ಣ, ಕೆ.ಟಿ.ಶಾಂತಕುಮಾರ್, ಜಿ.ನಾರಾಯಣ್, ವಕ್ತಾರ ವಿ.ಯೋಗೀಶ್, ತಾಪಂ ಸದಸ್ಯ ಎನ್.ಎಂ.ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಕಾಂತರಾಜು ಮತ್ತಿತರರಿದ್ದರು.
ಡೆತ್ ಸರ್ಟಿಫಿಕೇಟ್ ಮೇಲೆ ಮೋದಿ ಚಿತ್ರ ಹಾಕಲಿ ! : ಜನಧನ್ ಖಾತೆ ತೆರೆಯಲು, ಕೋವಿಡ್ ಆಕ್ಸಿಜನ್, ಬೆಡ್, ಲಸಿಕೆ ಅಷ್ಟೇ ಅಲ್ಲ, ಕೊನೆಗೆ ಸ್ಮಶಾನದಲ್ಲಿ ಮಣ್ಣಾಗಲೂ ಸರದಿಯಲ್ಲಿ ನಿಲ್ಲಬೇಕಾಗಿದೆ. ಕಾಂಗ್ರೆಸ್ ಎಂದಿಗೂ ಕೋವಿಡ್ ಲಸಿಕೆ ಬೇಡ ಎನ್ನಲಿಲ್ಲ. ಆದರೆ, ಲಸಿಕೆಯ ಪ್ರಮಾಣಪತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಇರುವುದನ್ನು ವಿರೋಧಿಸಿದ್ದೆವು. ಅದೇ ರೀತಿ ಸಾವಿನ ಪ್ರಮಾಣಪತ್ರದ ಮೇಲೂ ಅವರ ಭಾವಚಿತ್ರ ಹಾಕಿದರೆ ಇನ್ನೂ ಚೆನ್ನಾಗಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದರು.
ಅಂದು ಬಿಜೆಪಿಗೆ ಯುವಜನತೆಯೇ ಆಧಾರವಾಗಿದ್ದರು. ಇದೀಗ ಬಿಜೆಪಿ ಸರ್ಕಾರಗಳ ತಪ್ಪುಗಳನ್ನು ಖಂಡಿಸಿ ಇನ್‌ಸ್ಟಾಗ್ರಾಂ, ಟ್ವಿಟ್ಟರ್, ೇಸ್‌ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಯುವಜನತೆ ಖಂಡಿಸುತ್ತಿದ್ದಾರೆ. ಅವರೆಲ್ಲರ ಆಕ್ರೋಶದಿಂದ ಪಾರಾಗಲು ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಲು ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ