ಬಿಜೆಪಿಗೆ ಪ್ರಾದೇಶಿಕತೆಯ ಗೌರವವಿಲ್ಲ ; ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಟೀಕೆ; ಶಂಕುಸ್ಥಾಪನೆ ನಾಮಫಲಕದಲ್ಲಿ ಕನ್ನಡ ಕಣ್ಮರೆ

17TMK_DKS_Matt
Published on

ತುಮಕೂರು: ಭಾರತೀಯ ಜನತಾ ಪಕ್ಷದ ಮುಖಂಡರಿಗೆ ಪ್ರಾದೇಶಿಕತೆಯ ಕುರಿತು ಗೌರವವಿಲ್ಲ. ಒಕ್ಕೂಟ ವ್ಯವಸ್ಥೆಯ ಬಗ್ಗೆ ನಂಬಿಕೆ, ಬದ್ಧತೆಯೂ ಇಲ್ಲ ಎಂಬುದು ಭದ್ರಾವತಿಯಲ್ಲಿನ ಶಂಕುಸ್ಥಾಪನಾ ಸಮಾರಂಭದಲ್ಲಿ ದೃಢವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ನಗರದ ಸಿದ್ಧಗಂಗಾ ಮಠಕ್ಕೆ ಭಾನುವಾರ ಕೌಟುಂಬಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶ್ರೀಗಳಿಗೆ ಆಮಂತ್ರಣ ನೀಡಲು ಭೇಟಿ ನೀಡಿದ್ದ ಡಿಕೆಶಿ ಸುದ್ದಿಗಾರರ ಜತೆ ಮಾತನಾಡಿ, ಕೇಂದ್ರ ಸಚಿವರು ಬೇರೆ ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತೃಭಾಷೆಯಲ್ಲಿ ಮಾತನಾಡಿ ಜನರ ಓಲೈಕೆ ಮಾಡುತ್ತಾರೆ ಆದರೆ, ಕರ್ನಾಟಕದಲ್ಲಿ ಕನ್ನಡ ಕಡೆಗಣಿಸಿದ್ದಾರೆ ಎಂದು ಹರಿಹಾಯ್ದರು.

ಕನ್ನಡಿಗರ ಬಗ್ಗೆ ಬಿಜೆಪಿ ಮುಖಂಡರಿಗೆ ಅಸಡ್ಡೆ, ನಿರ್ಲಕ್ಷ್ಯ ಎಂತದ್ದು ಎಂಬುದು ಜನತೆಗೂ ಗೊತ್ತಾಗಿದೆ, ಶಂಕುಸ್ಥಾಪನಾ ನಾಮಫಲಕದಲ್ಲಿ ಕನ್ನಡ ಭಾಷೆ ಮರೆಯಾಗಿರುವ ಕುರಿತು ಬಿಜೆಪಿ 25 ಸಂಸದರಲ್ಲಿ ಒಬ್ಬರಿಗೂ ಮಾತನಾಡುವ ಧೈರ್ಯವಿಲ್ಲ, ನಾಡು-ನುಡಿ ರಕ್ಷಣೆಯ ಭರವಸೆಯಿಂದ ಗೆದ್ದು ಮೌನವಾಗಿರುವುದು ನಾಡಿಗೆ ಬಗೆದ ದ್ರೋಹ ಎಂದು ಕಿಡಿಕಾರಿದರು.

ರೈತರು ದೇಶದ ಬೆನ್ನೆಲುಬು ಎಂದು ಭಾಷಣ ಮಾಡುವ ಬಿಜೆಪಿಯವರಿಗೆ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಕಾಣಿಸುತ್ತಿಲ್ಲ, ಕೃಷಿ ಸಂಬಂಧಿತ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಜ.20ರಂದು ನಡೆಯುವ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಭಾಗವಹಿಸಲಿದೆ. ರಾಜ್ಯದೆಲ್ಲೆಡೆಯಿಂದ ರೈತರು, ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸಲಿದ್ದು ದೆಹಲಿಯಲ್ಲಿನ ರೈತ ಹೋರಾಟಕ್ಕೆ ನೈತಿಕ ಬೆಂಬಲ ಘೋಷಿಸಿ, ಬೃಹತ್ ಪ್ರತಿಭಟನೆ ನಡೆಯಲಿದ್ದು, ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.

ರಾಜ್ಯದಲ್ಲಿ ಆಡಳಿತ ಯಂತ್ರ ಹಳ್ಳ ಹಿಡಿದಿದೆ, ಸಾರ್ವಜನಿಕ ಹಿತ ಕಾಯುವ ಯಾವುದೇ ಅಜೆಂಡಾ ಸರ್ಕಾರದ ಮುಂದಿಲ್ಲ. ವೈಯುಕ್ತಿಕ ಲಾಭಕೋಸ್ಕರವೇ ಹಲವು ಅಜೆಂಡಾಗಳನ್ನು ಜಾರಿಗೆ ತರುತ್ತಿದ್ದಾರೆ. ಬಿಜೆಪಿಯ ಈ ನಡವಳಿಕೆಗೆ ಜನ ಉತ್ತರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net