ನಾನೂ ಸೇರಿ ಎಲ್ಲರ ಬಾಯಿಗೆ ಬೀಗ ಹಾಕಿದೆ,   ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಡಿಕೆಶಿ ಪ್ರತಿಕ್ರಿಯೆ

IMG_20250117_170749_651.jpg
Published on

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ನಾನೂ ಸೇರಿದಂತೆ ಎಲ್ಲರ ಬಾಯಿಗೆ ಹೈಕಮಾಂಡ್ ಬೀಗ ಹಾಕಿದೆ, ಒಂದು ವೇಳೆ ಯಾರಾದರೂ ಮಾತನಾಡಿದರೂ ಅದನ್ನು ಪಕ್ಷದ ಹಿರಿಯರು ನೋಡಿಕೊಳ್ಳುತ್ತಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರತಿಕ್ರಿಯಿಸಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗಾವಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ನಮ್ಮ ರಾಷ್ಟ್ರೀಯ ನಾಯಕರು, ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ಕಾರ್ಯಕರ್ತರಾಗಿ ಮುನ್ನಡೆಯುತ್ತಿದ್ದೇವೆ ಎಂದರು.

ಬೆಳಗಾವಿಯಿಂದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಗಾಂಧಿ ಬಾವಿಯ ನೀರನ್ನು ಬಳಸಿ ಬೆಳಗಾವಿಯಿಂದಲೇ ಕೊಳೆ ತೊಳೆಯುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ತಿರುಗೇಟು ನೀಡಿದರು.

ಜೈ ಬಾಪು, ಜೈಭೀಮ, ಜೈ ಸಂವಿಧಾನ ಕಾರ್ಯಕ್ರಮ ಜ. 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜ. 18ರಂದು ವಿವಿಧ ಜಿಲ್ಲೆಗಳ ಪೂರ್ವಭಾವಿ ಸಭೆ ನಡೆಸುತ್ತಿದ್ದೇವೆ. ಇದರಲ್ಲಿ ಸುರ್ಜೇವಾಲಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪಾಲ್ಗೊಳ್ಳುವರು ಎಂದರು.

ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಅವರು ಅನಾವರಣ ಮಾಡಲಿದ್ದಾರೆ. ಇದು ಸರ್ಕಾರದ ಕಾರ್ಯಕ್ರಮ, ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಪಕ್ಷಭೇದ ಮರೆತು ಎಲ್ಲರನ್ನೂ ಆಹ್ವಾನಿಸಲಾಗುತ್ತಿದೆ ಎಂದು ಹೇಳಿದರು.

ಜೈಬಾಪು, ಜೈಭೀಮ, ಜೈಸಂವಿಧಾನ ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂಬುದು ನಮ್ಮ ಬಯಕೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ, ದರೋಡೆ ಪ್ರಕರಣಗಳ ಬಗ್ಗೆ ಗೃಹ ಸಚಿವರು ಪ್ರತಿಕ್ರಿಯೆ ನೀಡುತ್ತಾರೆ ಎಂದರು.

ನಕಲಿ ಗಾಂಧಿ ಅಧಿವೇಶನ ಎಂಬ ಬಿಜೆಪಿ ಟೀಕೆಗೆ, ಗಾಂಧಿ ಎಂಬುದು ಒಂದೇ. ನಾವೆಲ್ಲ ಗಾಂಧಿ ವಂಶಸ್ಥರು, ಗಾಂಧಿ ಭಾರತದವರು, ಅದಕ್ಕಾಗಿ ಗಾಂಧಿ ಭಾರತ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದರ ಜವಾಬ್ದಾರಿಯನ್ನು ಸಚಿವ ಎಚ್.ಕೆ. ಪಾಟೀಲ್ ಅವರಿಗೆ ವಹಿಸಲಾಗಿದೆ. ಇದರಲ್ಲಿ ಪಕ್ಷ ಮತ್ತು ಸರ್ಕಾರ ಯಾವ ಯಾವ ಕೆಲಸ ಮಾಡಬೇಕೆಂಬುದನ್ನು ಅವರು ತೀರ್ಮಾನಿಸುತ್ತಾರೆ ಎಂದು ಹೇಳಿದರು.

ಮಹದಾಯಿ ಜಾರಿಗೆ ಕ್ರಮ:
ಮಹದಾಯಿ ಯೋಜನೆ ವಿಚಾರವಾಗಿ ಈಗಾಗಲೇ ನಾವು ಹಾಗೂ ಸಚಿವ ಎಚ್.ಕೆ. ಪಾಟೀಲ್ ಅವರು ಚರ್ಚೆ ಮಾಡಿದ್ದೇವೆ. ಈ ಹಿಂದೆ ದೆಹಲಿಯಲ್ಲಿ ಪ್ರಧಾನಿಯವರಿಗೆ ಮನವಿ ಮಾಡಿದ್ದೇವೆ. ಅವರು ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡುವುದಾಗಿ ಹೇಳಿದ್ದಾರೆ. ಮುಂದಿನ ಸಂಸತ್ ಅಧಿವೇಶನದಲ್ಲಿ ಯೋಜನೆ ಜಾರಿಗಾಗಿ ಇನ್ನಷ್ಟು ಒತ್ತಡ ತರುವ ಕೆಲಸ ಮಾಡುತ್ತೇವೆ ಎಂದು ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net