ಜನರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ ಅಧಿಕಾರಿಗಳಿಗೆ ಡಿಕೆಶಿ ಎಚ್ಚರಿಕೆ

DK SHIVAKUMAR MEETING CHANNAPTNA)
Published on

ರಾಮನಗರ: ಸರ್ಕಾರದ ಅಧಿಕಾರಿಗಳು, ಸಿಬ್ಬಂದಿಗಳು ಸಾರ್ವಜನಿಕರ ಸೇವೆ ಮಾಡುವರು, ಈ ಸೇವೆ ಮಾಡಲೇಂದೇ ಅವರು ಈ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ, ಆ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.

ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದ ಶ್ರೀ ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಕಚೇರಿಗಳು ದೇವಾಲಗಳಿದ್ದಂತೆ. ಅಧಿಕಾರಿಗಳು ನೊಂದ ಜನರಿಗೆ ಸಹಾಯ ಮಾಡಬೇಕು. ಅವರ ಸಮಸ್ಯೆ, ಅಹವಾಲುಗಳಿಗೆ ಸ್ಪಂದಿಸಬೇಕು, ಜನ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ನಾನು ಕೂಡ  ಒಬ್ಬ ಸರ್ಕಾರಿ ನೌಕರನಿದ್ದಂತೆ, ಅಂತೆಯೇ ಜನರಿಂದ ಆಯ್ಕೆಯಾದ ಪ್ರತಿನಿಧಿಗಳೆಲ್ಲರೂ ಸರ್ಕಾರಿ ನೌಕರರೇ. ಜನರ ಸೇವೆ ಮಾಡಲು ಅವರು ಈ ಆಯ್ಕೆ ಮಾಡಿದ್ದಾರೆ. ಅವರ ಕುಂದುಕೊರತೆಗಳನ್ನು ನಿವಾರಿಸಲು ಈ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಾಲ, ಸೌಲಭ್ಯ, ನಿವೇಶನ, ವಸತಿ, ರಸ್ತೆ, ಸ್ಮಶಾನ, ಅಂತರ್ಜಲ ಹೆಚ್ಚಿಸುವ ಬೇಡಿಕೆ, ಪಿಂಚಣಿ, ಬರ ಪರಿಹಾರಕ್ಕಾಗಿ, ಪೋಡಿ, ಖಾತೆ ಬದಲಾವಣೆ ಕುರಿತಾಗಿ ಇದೂವರೆಗೂ ಸುಮಾರು ಮೂರು ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಅಧಿಕಾರಿಗಳು ಪರಿಶೀಲಿಸಿ ಅವರ ಸಮಸ್ಯೆಗೆ ಪರಿಹಾರ ನೀಡಬೇಕು. ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಕುಂದುಕೊರತೆ ಪರಿಹರಿಸಲು ಲಂಚ ಪಡೆಯುತ್ತಿರುವ ಕುರಿತು ಕರೆ ಬಂದರೆ ಅವರನ್ನು ಕೂಡಲೇ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತರಿಗೆ ಯಾವುದೇ ವೇತನ, ಪಿಂಚಣಿ ಸೌಲಭ್ಯವಿಲ್ಲ, ಅವರಿಗೆ ನಿವೃತ್ತಿ ಇರುವುದಿಲ್ಲ. ಅವರು ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ರೈತರು ಈ ಕಾರ್ಯಕ್ರಮಕ್ಕೆ ಆಗಮಿಸಲು ಯಾವುದೇ ಸಂಕೋಚ ಬೇಡ ಅಥವಾ ತಾವೇ ಖುದ್ದು ತಾಲ್ಲೂಕು ಕಚೇರಿಗೆ ತೆರಳಿ ತಮ್ಮ ಸಮಸ್ಯೆಯ ಕುರಿತು ಅರ್ಜಿ ನೀಡಬಹುದಾಗಿದೆ, ಅಧಿಕಾರಿಗಳು ಈ ಅರ್ಜಿಗಳನ್ನು ಪರಿಶೀಲಿಸಿ ತಮ್ಮ ಸಮಸ್ಯೆಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ನೀಡುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net