

ಮೈಸೂರು: ಪ್ರತ್ಯೇಕ ರಾಷ್ಟ್ರದ ಕುರಿತು ಸಂಸದ ಡಿ.ಕೆ.ಸುರೇಶ್ ನೀಡಿರುವ ಹೇಳಿಕೆಯನ್ನು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಮರ್ಥಿಸಿಕೊಂಡರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಅದರ ವಿರುದ್ಧ ಧ್ವನಿ ಎತ್ತಿದ ಏಕೈಕ ಗಂಡು ಡಿ.ಕೆ.ಸುರೇಶ್. ಅನ್ಯಾಯವಾಗಿರುವುದನ್ನು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅದರಲ್ಲಿ ನನಗೆ ಯಾವ ತಪ್ಪು ಕಾಣುತ್ತಿಲ್ಲ ಎಂದು ಹೇಳಿದರು.
ಭಾವನಾತ್ಮಕ ಆಕ್ರೋಶ ಬಂದಾಗ ಆ ರೀತಿಯ ಪದ ಬಂದಿರುವುದು ಸಹಜ. ನರೇಂದ್ರ ಮೋದಿ, ಬಿಜೆಪಿಯಿಂದ ಈ ರಾಜ್ಯಕ್ಕೆ ಅನ್ಯಾಯವಾಗಿದೆ. ಅದನ್ನು ಯಾವ ಸಂಸದನೂ ಪ್ರಶ್ನೆ ಮಾಡಲಿಲ್ಲ. ಪ್ರಶ್ನೆ ಮಾಡಿರುವುದು ಡಿ.ಕೆ. ಸುರೇಶ್ ಮಾತ್ರ. ಏಕೆ ಈ ಪ್ರಶ್ನೆ ಎತ್ತಿದರು ಎಂಬುದರ ಕುರಿತು ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಧ್ವಜದ ವಿಚಾರದಲ್ಲಿ ಅನುಮತಿ ಕೇಳಿದವರಿಂದಲೂ ಲೋಪ ಆಗಿದೆ, ಆಡಳಿತಾತ್ಮಕವಾಗಿಯೂ ಕೆಲವು ಲೋಪಗಳಾಗಿವೆ. ಅದನ್ನು ಕೆಲವರು ಪ್ರಚೋದನಕಾರಿಯಾಗಿ ಬಳಸುತ್ತಿದ್ದಾರೆ. ನಮಗೆ ರಾಷ್ಟ್ರ ಧ್ವಜ ಮಾತ್ರ ಮುಖ್ಯ. ಧ್ವಜ ಕಂಬದಲ್ಲಿ ಕೇಸರಿಧ್ವಜ ಏಕೆ ಹಾಕಲು ಬಿಟ್ಟರು? ಎಲ್ಲಿ ಲೋಪವಾಗಿದೆ ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದು, ಶಾಂತಿ ಸಭೆ ನಡೆಸಬೇಕಿದೆ.
ಆದರೆ, ಈ ಸಭೆ ಮಾಡಲು ಸದ್ಯಕ್ಕೆ ಕಾಲ ಪಕ್ವವಾಗಿಲ್ಲ ಎಂದರು.
ನಮಗೂ ಹಿಂದು ಧರ್ಮ, ದೇವರ ಬಗ್ಗೆ ಭಕ್ತಿ ಇದೆ. ನಾವು ಕೂಡ ಪೂಜೆ ಮಾಡಿಯೇ ಮನೆಯಿಂದ ಹೊರಬರುವುದು. ನಾವು ಬಿಜೆಪಿ ಅವರಿಂದ ಹಿಂದುತ್ವದ ಪಾಠ ಕಲಿಯಬೇಕಿಲ್ಲ ಎಂದು ಕಿಡಿಕಾರಿದರು.