

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರೈತರ ಸಮಸ್ಯೆ ಕೇಳಲು ಬಮುಲ್‌ನಿಂದ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಾಲ್ ಸೆಂಟರ್ ತೆರೆಯಲಾಗುವುದು ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.
ನಗರದ ಬಮುಲ್ ಶಿಬಿರ ಕಚೇರಿಯಲಿ ಹಮ್ಮಿಕೊಂಡಿದ್ದ ರೈತರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಬಮುಲ್ ಅಧ್ಯಕ್ಷನಾದ ಬಳಿಕ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ರೈತರ, ಒಕ್ಕೂಟದ ಸಮಸ್ಯೆ ಆಲಿಸಲಾಗುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಹಾಲು ಪೂರೈಕೆ ಕಡಿಮೆಯಾಗಿದ್ದು, ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಚರ್ಚಿಸುತ್ತೇನೆ. 160 ಉಪ ಉತ್ಪನ್ನಗಳಿವೆ. ಇದನ್ನ ಜನರಿಗೆ ತಲುಪಿಸಬೇಕಿದೆ. ರೈತರಿಗೆ ಹಸುಗಳನ್ನು ಖರೀದಿ ಮಾಡಲು ಬಿಡಿಸಿಸಿ ಬ್ಯಾಂಕ್‌ನಿಂದ ಶೇ.3 ಬಡ್ಡಿ ದರದಲ್ಲಿ 15 ಲಕ್ಷ ರೂ.ವರೆಗೆ ಸಾಲ ನೀಡಲು ಕ್ರಮ ಜರುಗಿಸಲಾಗಿದೆ ಎಂದರು. ಬಮುಲ್‌ನಲ್ಲಿ 17 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. 12 ಲೀ. ಹಾಲು ಮಾರಾಟವಾಗುತ್ತಿದೆ. 2 ಲಕ್ಷ ಲೀ. ಹಾಲು ಉಪ ಉತ್ಪನ್ನಗಳಿಗೆ ಬಳಸಲಾಗುತ್ತಿದ್ದು, 3 ಲಕ್ಷ ಲೀ. ಹಾಲು ಪೌಡರ್ ಉತ್ಪಾದನೆಗೆ ಬಳಸಲಾಗುತ್ತಿದೆ.
ಪ್ರತಿನಿತ್ಯ 6 ಲಕ್ಷ ಲೀ. ಹಾಲಿಗೆ ತಲಾ 1 ರೂ. ನಷ್ಟ ಮಾಡಿಕೊಂಡು ಮಾರುಕಟ್ಟೆಗೆ ನೀಡಲಾಗುತ್ತಿದೆ. ಬಮುಲ್‌ನಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸುತ್ತಿವೆ. ಆದ್ದರಿಂದ ಸಂಪೂರ್ಣ ವ್ಯವಸ್ಥೆ ಸರಿ ಮಾಡಬೇಕಿದೆ. ಆಡಳಿತ ವೆಚ್ಚ ಕಡಿತಗೊಳಿಸಿ, ಹಾಲಿನ ಗುಣಮಟ್ಟ ಹೆಚ್ಚಿಸಬೇಕಿದೆ ಎಂದರು.
ಶೀಘ್ರ ಘಟಕ ಸ್ಥಾಪನೆಯಾಗಬೇಕು;
ಬಮುಲ್ ನಿರ್ದೇಶಕ ಬಿ.ಸಿ.ಆನಂದ್ ಮಾತನಾಡಿ, ತಾಲೂಕಿನಲ್ಲಿ 22 ಸಾವಿರ ರೈತ ಕುಟುಂಬ ಹಾಲು ಉತ್ಪಾದನೆಯಲ್ಲಿ ತೊಡಗಿವೆ. ಬಮುಲ್‌ಗೆ ದೊಡ್ಡಬಳ್ಳಾಪುರ, ದೇವನಹಳ್ಳಿ ಕಿರೀಟಗಳಿದ್ದಂತೆ. ಈ ಭಾಗದಲ್ಲಿ ಟೆಟ್ರಾ ಪ್ಯಾಕ್ ಘಟಕಕ್ಕೆ ಜಮೀನು ಖರೀದಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆಯಂತೆ 15 ಎಕರೆ ಜಮೀನು ಖರೀದಿ ಮಾಡಲಾಗಿದೆ. ಶೀಘ್ರ ಘಟಕ ಸ್ಥಾಪನೆಗೆ ಕ್ರಮವಹಿಸಬೇಕು ಎಂದು ಬಮುಲ್ ಅಧ್ಯಕ್ಷರಿಗೆ ಮನವಿ ಮಾಡಿದರು.
ಗೋವಾ ಅನಗತ್ಯ ತಕರಾರು: ಕುಡಿಯುವ ನೀರಿನ ಯೋಜನೆಗೆ ಆದ್ಯತೆ ಎಂಬುದು ರಾಷ್ಟ್ರೀಯ ಜಲ ನೀತಿಯ ಮೂಲ ಉದ್ದೇಶವಾಗಿದೆ. ಕನ್ನಡಿಗರ ಕುಡಿಯುವ ನೀರಿನ ಯೋಜನೆಗೆ ಅವಕಾಶ ಕಲ್ವಿಸಬೇಕು ಎಂದು ಡಿ.ಕೆ. ಸುರೇಶ್ ತಿಳಿಸಿದರು. ಮಹದಾಯಿ ವಿಚಾರ ಈಗಾಗಲೇ ನ್ಯಾಯಾಧಿಕರಣದಲ್ಲಿ ತೀರ್ಮಾನವಾಗಿದ್ದು, ನಮ್ಮ ಪಾಲಿನ ನೀರು ಎಷ್ಟು ಎಂದು ಸ್ಪಷ್ಟವಾಗಿದೆ. ಗೋವಾದವರು ಅನಗತ್ಯವಾಗಿ ನಮ್ಮ ಕುಡಿಯುವ ನೀರಿನ ಯೋಜನೆ ತಡೆಯುತ್ತಿದ್ದಾರೆ. ಕನ್ನಡಿಗರಿಗೆ ಗೋವಾ ಜತೆ ಉತ್ತಮ ಬಾಂಧವ್ಯವಿದೆ. ಅನಗತ್ಯವಾಗಿ ಗೊಂದಲ ಸೃಷ್ಟಿಸಿ ಈ ಬಾಂಧವ್ಯ ಹಾಳುಮಾಡುವುದು ಒಳ್ಳೆಯದಲ್ಲ ಎಂದರು.
ನಂದಿನಿ ಪರಿಶುದ್ಧ ಹಾಲು: ಬಮುಲ್ ಅಧ್ಯಕ್ಷನಾದ ಬಳಿಕ ನಾನು ದೊಡ್ಡಬಳ್ಳಾಪುರಕ್ಕೆ ಭೇಟಿ ಮಾಡಿ, ಇಲ್ಲಿನ ರೈತರು ಹಾಗೂ ಹಾಲು ಒಕ್ಕೂಟಗಳ ಪದಾಧಿಕಾರಿಗಳ ಜತೆ ಚರ್ಚಿಸಿ, ಇಲ್ಲಿನ ಸಮಸ್ಯೆ ಅರಿಯಲು ಬಂದಿದ್ದೇನೆ. ಮೂರು ಜಿಲ್ಲೆಯ ನಾಯಕರು ನನಗೆ ಬಮುಲ್ ಜವಾಬ್ದಾರಿ ವಹಿಸಿದ ನಂತರ ಹಾಲು ಉತ್ಪಾಕರ ಸಮಸ್ಯೆಗಳ ಬಗ್ಗೆ ಸಾಕಷ್ಟು ಚಿಂತನೆ ನಡೆಸಿದ್ದೇನೆ ಎಂದು ಅಧ್ಯಕ್ಷರು ತಿಳಿಸಿದರು. ನಂದಿನಿ ಪರಿಶುದ್ಧ ಹಾಲು. ಬೆಲೆ ಕಡಿಮೆ ಎಂದು ಇದನ್ನು ಬಳಸಲು ಹಿಂಜರಿಯುತ್ತಾರೆ. ನಾವು ಸಂರಕ್ಷಕ ರಾಸಾಯನಗಳನ್ನು ಬಳಸಿದರೆ ಹಾಲಿನ ಬಾಳಿಕೆ ಅವಧಿ ವಿಸ್ತರಿಸಬಹುದು. ಆದರೆ ಜನರ ಆರೋಗ್ಯದ ದೃಷ್ಟಿಯಿಂದ ಅಂದು ಸಂಗ್ರಹಿಸಿದ ಹಾಲನ್ನು ಅಂದೇ ಮಾರುಕಟ್ಟೆಗೆ ಕಳುಹಿಸುವ ವ್ಯವಸ್ಥೆ ಹೊಂದಿದ್ದೇವೆ ಎಂದರು.
ಹೈನುಗಾರಿಕೆಯಿಂದ ಸ್ವಾವಲಂಬನೆ: ನಗರೀಕರಣದ ಪರಿಣಾಮದಿಂದಾಗಿ ದೊಡ್ಡಬಳ್ಳಾಪುರದಲ್ಲಿ ಹಾಲು ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತಿದೆ. ಈ ಮಧ್ಯೆ ನಾವು ಹಾಲಿನ ಉತ್ಪಾದನೆ ಹೆಚ್ಚಿಸಬೇಕು. ಪ್ರಸ್ತುತ ಬಹುತೇಕ ಯುವಕರು ನಿರುದ್ಯೋಗಿಗಳಾಗಿದ್ದು, ಇದಕ್ಕೆ ಪರಿಹಾರ ಹೈನುಗಾರಿಕೆ. ಯುವಕರು ಇದರಲ್ಲಿ ತೊಡಗಿಸಿಕೊಂಡರೆ ಸ್ವಾವಲಂಬಿಗಳಾಗಬಹುದು ಎಂದು ಅಧ್ಯಕ್ಷರು ತಿಳಿಸಿದರು.