

ವಿಜಯವಾಣಿ ಸುದ್ದಿಜಾಲ ಮಂಗಳೂರು
ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಪ್ರಗತಿಗಾಗಿ ಬ್ಯಾಂಕುಗಳು ಶ್ರಮಿಸಬೇಕು. ಸಿಬಿಲ್, ಖಾತೆಯ ತಗಾದೆ ತೆಗೆಯದೆ ಅಪೇಕ್ಷಿತರಿಗೆ ಮೊದಲ ಕಂತಿನಲ್ಲಿ 10,000 ರೂ. ಸಾಲ ಸೌಲಭ್ಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜರುಗಿದ ಜಿಲ್ಲಾ ಬ್ಯಾಂಕುಗಳ ಪರಿಶೀಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಪಿಎಂ ಸ್ವನಿಧಿ ಗುರಿ ಸಾಧನೆಗಾಗಿ ಎಲ್ಲಾ ಬ್ಯಾಂಕುಗಳು ತಕ್ಷಣದಿಂದ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಅವರು ಈ ಯೋಜನೆಯ ಪ್ರಗತಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಈ ಯೋಜನೆ ಅಸಂಘಟಿತ ವಲಯದ ಜನತೆಗೆ ಇರುವ ಯೋಜನೆ. ಅವರಿಗೆ ಯಾವುದೇ ಭದ್ರತೆ ಕೇಳದೆ ಸಾಲ ನೀಡಬೇಕು. ಬ್ಯಾಂಕುಗಳು ಶಾಖಾ ಮಟ್ಟದಲ್ಲಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಬೇಕು. ಯೋಜನೆಯ ಅರ್ಜಿಯನ್ನು ಒಂದು ವಾರದೊಳಗೆ ಇತ್ಯರ್ಥ ಪಡಿಸಬೇಕು ಎಂದು ಅವರು ಹೇಳಿದರು.
ಮೊದಲ 10,000 ರೂ. ವನ್ನು ಸರಿಯಾಗಿ ಪಾವತಿಸಿದರೆ ಎರಡನೇ ಅವಧಿಯಲ್ಲಿ 20,000 ರೂ. ಮತ್ತು ಅದನ್ನು ಸಮರ್ಪಕವಾಗಿ ಪಾವತಿಸಿದರೆ ನಂತರದ ಅವಧಿಯಲ್ಲಿ 50,000 ರೂ. ಸಾಲ ಪಡೆಯಲು ಅರ್ಜಿದಾರರು ಅರ್ಹರಾಗಿರುತ್ತಾರೆ. ಎರಡು ಮತ್ತು ಮೂರನೇ ಹಂತದ ಸಾಲ ಸೌಲಭ್ಯವನ್ನು ಬ್ಯಾಂಕುಗಳು ಯಾವುದೇ ಕಾರಣಕ್ಕೆ ನಿರಾಕರಿಸುವಂತಿಲ್ಲ. ಸಾಲ ಮಂಜೂರಾತಿಯಲ್ಲಿ ವಿಳಂಬ, ನಿರಾಕರಣೆಗೆ ಬ್ಯಾಂಕುಗಳ ಶಾಖಾ ವ್ಯವಸ್ಥಾಪಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಪ್ರಸ್ತುತ ಯೋಜನೆ ಜಾರಿ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾಧನೆ ತೃಪ್ತಿಕರವಾಗಿಲ್ಲ ಎಂದು ಅವರು ಎಚ್ಚರಿಸಿದರು.
ಪಿಎಂ ಸ್ವನಿಧಿಗೆ ಮೊದಲು ಒಟ್ಟು ಜನಸಂಖ್ಯೆಯ ಶೇ.1ನ್ನು ಗುರಿಯೆಂದು ನಿಗದಿ ಪಡಿಸಲಾಗಿತ್ತು. ಬಳಿಕ ಅದನ್ನು ಶೇ.1.5ಕ್ಕೆ ಹೆಚ್ಚಿಸಲಾಗಿದೆ. ಜಿಲ್ಲೆಗೆ 10,342 ಗುರಿ ನಿಗದಿಯಾಗಿದೆ. 6,061 ಮಂದಿಗೆ ಸಾಲ ಸೌಲಭ್ಯ ನೀಡಲಾಗಿದೆ. 4,281 ಗುರಿ ಸಾಧನೆಗೆ ಬಾಕಿ ಇದೆ. ಅದನ್ನು ಬ್ಯಾಂಕುಗಳಿಗೆ ಮರು ಹಂಚಿಕೆ ಮಾಡಿ ಗುರಿ ಸಾಧಿಸಲು ಸಮಯ ನಿಗದಿ ಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ವ್ಯವಹಾರ ಏರಿಕೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2023ರ ಜೂನ್ ಅಂತ್ಯಕ್ಕೆ ಬ್ಯಾಂಕುಗಳ ಒಟ್ಟು ವ್ಯವಹಾರ 1,06,722.18 ಕೋಟಿ ರೂ. ಆಗಿದ್ದು; ಶೇ.12.46ರಷ್ಟು ಬೆಳವಣಿಗೆ ಸಾಧಿಸಿದೆ. ಇದೇ ಅವಧಿಯ ಠೇವಣಿ 63,605.80 ಕೋಟಿ ರೂ. ಆಗಿದ್ದು, ಗತ ವರ್ಷಕ್ಕಿಂತ ಶೇ.8.96ರಷ್ಟು ಬೆಳವಣಿಗೆ ದಾಖಲಿಸಿದೆ. ಒಟ್ಟು ಸಾಲವು 43,116.38 ಕೋಟಿ ರೂ. ಆಗಿದ್ದು, ಶೇ.18.05 ಏರಿಕೆ ಕಂಡಿದೆ. ಸಾಲ ಠೇವಣಿ ಅನುಪಾತ ಶೇ.67.79 ಆಗಿದೆ.
ಜೂನ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಆದ್ಯತಾ ವಲಯ ಮತ್ತು ಆದ್ಯತೇತರ ವಲಯಗಳಲ್ಲಿ ಒಟ್ಟು 17,048.26 ಕೋಟಿ ರೂ. ಸಾಲ ವಿತರಿಸಲಾಗಿದೆ. ವಾರ್ಷಿಕ ಗುರಿ 43,300 ಕೋಟಿ ರೂ. ಆಗಿದ್ದು, ಶೇ.39.37 ಗುರಿ ಸಾಧನೆ ಆಗಿದೆ ಎಂದು ಬ್ಯಾಂಕು ಆಧಿಕಾರಿಗಳು ಮಾಹಿತಿ ನೀಡಿದರು.
* ಫಲಾನುಭವಿಗಳ ಸಮಾವೇಶ
ಅಕ್ಟೋಬರ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಭಾರತ ಸರಕಾರದ ಹಣಕಾಸು ಸಚಿವರು ಸಮಾವೇಶದಲ್ಲಿ ಭಾಗವಹಿಸುವರು. ಆ ವೇಳೆಗೆ ಪಿಎಂ ಸ್ವನಿಧಿ, ಪಿಎಂಜೆಡಿವೈ, ಪಿಎಂಜೆಜೆಬಿವೈ, ಪಿಎಂಎಶ್‌ಬಿವೈ, ಎಪಿವೈ ಹಾಗೂ ವಿಶ್ವಕರ್ಮ ಯೋಜನೆಯಲ್ಲಿ ಉನ್ನತ ಪ್ರಗತಿ ಸಾಧಿಸಲು ಬ್ಯಾಂಕುಗಳು ಶ್ರಮಿಸಬೇಕು ಎಂದು ಸಂಸದರು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ ಕೆ ಅಧ್ಯಕ್ಷತೆ ವಹಿಸಿದ್ದರು. ಲೀಡ್ ಕೆನರಾ ಬ್ಯಾಂಕ್ ಮಹಾ ಪ್ರಬಂಧಕ ಸುಧಾಕರ ಕೊಟ್ಟಾರಿ, ನಬಾರ್ಡ್ ಡಿಡಿಎಂ ಸಂಗೀತಾ ಕರ್ತ, ಆರ್‌ಬಿಐ ಮ್ಯಾನೇಜರ್ ತನು ನಂಜಪ್ಪ ಮತ್ತು ಲೀಡ್ ಬ್ಯಾಂಕ್ ಮೆನೇಜರ್ ಕವಿತಾ ಎನ್.ಶೆಟ್ಟಿ ಉಪಸ್ಥಿತರಿದ್ದರು.
((( ಕ್ವೋಟ್
‘ಝೀರೋ ಬ್ಯಾಲೆನ್ಸ್’ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತ ನಿರ್ವಹಿಸಬೇಕು ಎಂದು ಬ್ಯಾಂಕುಗಳು ಗ್ರಾಹಕರನ್ನು ಒತ್ತಾಯಿಸುವುದು ನಿಯಮ ಬಾಹಿರ. ಜೊತೆಗೆ ಅಂತಹ ಖಾತೆಗಳನ್ನು ಸಮಾಪ್ತಿಗೊಳಿಸಿ ಹೊಸ ಖಾತೆ ತೆರೆಯಲು ಒತ್ತಾಯ ಮಾಡುವುದು ಕಾನೂನು ಬಾಹಿರವಾಗಿದೆ. ಇದನ್ನು ಬ್ಯಾಂಕುಗಳು ಗಮನಿಸಬೇಕು.
* ಡಾ.ಆನಂದ ಕೆ.
ಸಿಇಒ, ದ.ಕ ಜಿಲ್ಲಾ ಪಂಚಾಯಿತಿ