ದೇಶದಲ್ಲಿ ಕಾನೂನೇ ಇಲ್ಲವೇ ?; ಮಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಪ್ರಶ್ನೆ

DK SHI
Published on

ಮಂಗಳೂರು: ಉತ್ತರ ಪ್ರದೇಶ ರೈತರ ಮೇಲಿನ ಹಿಂಸಾಚಾರ ನೋಡಿದರೆ, ದೇಶದಲ್ಲಿ ಕಾನೂನೇ ಇನ್ನವೇನೋ ಅನ್ನುವ ಪ್ರಶ್ನೆ ಮೂಡುತ್ತಿದೆ. ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರೊಬ್ಬರ ಮಗ ಮತ್ತು ಉತ್ತರ ಪ್ರದೇಶದ ಉಪಮುಖ್ಯಮಂತ್ರಿಯ ಮಗ ಕಾರುಹತ್ತಿಸಿ ನಾಲ್ವರ ಸಾವು ಸಂಭವಿಸಿ ಹಲವು ಗಂಟೆಗಳೇ ನ ಕಳೆದೂ, ಅವರನ್ನು ಬಂಧಿಸುವ, ಮಂತ್ರಿಗಳಿಂದ ರಾಜೀನಾಮೆ ಪಡೆಯುವ ಕೆಲಸವೇ ನಡೆದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿರುವ ಅವರು, ಮಂಗಳವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿದ್ದ ಪ್ರಿಯಾಂಕಾ ಗಾಂಧಿ ಅವರ ಮೇಲೂ ಮ್ಯಾನ್‌ ಹ್ಯಾಂಡ್ಲಿಂಗ್‌ ಮಾಡಿದ್ದಾರೆ. ಅವರ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದು ಭಾರತೀಯ ಸಂಸ್ಕೃತಿಗೂ ಮಾಡಿದ ಅವಮಾನ. ನಾವೆಲ್ಲ ರೈತರ ಪರವಾಗಿ ನಿಂತು ಹೋರಾಟ ಮಾಡುತ್ತೇವೆ.
ಜಿಲ್ಲೆಯಲ್ಲೂ ಬಿಜೆಪಿ, ಸಂಘ ಪರಿವಾರದ ಪುಂಡಾಟ ಜಾಸ್ತಿಯಾಗಿದ್ದು, ವಿದ್ಯಾರ್ಥಿಗಳು, ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದು ಇಲ್ಲಿನ ಕಾನೂನು ಪರಿಸ್ಥಿತಿಯನ್ನು ತೋರಿಸುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಿಗಳನ್ನು ದುರುಪಯೋಗಪಡಿಸುತ್ತಿದ್ದು, ಪೊಲೀಸರು ತಮ್ಮ ಅಧಿಕಾರವನ್ನು ಕಾರ್ಯಕರ್ತರಿಗೆ ಬಿಟ್ಟು ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಡಿಕೆ ಶಿವಕುಮಾರ್‌ ಈ ಹಿಂದೆ ಇಂಧನ ಸಚಿವರಾಗಿದ್ದಾಗ ಸುಳ್ಯದ ವ್ಯಕ್ತಿಯೊಬ್ಬರು ಕರೆ ಮಾಡಿ ಬೈದಿದ್ದ ಪ್ರಕರಣಕ್ಕೆ ಸಂಬಂಧಿಸಿ ವಾರಂಟ್‌ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸುಳ್ಯ ಕೋರ್ಟ್‌ಗೆ ಹಾಜರಾಗಲು ಜಿಲ್ಲೆಗೆ ಆಗಮಿಸಿದ್ದಾರೆ.
ಯಾರೋ ಒಬ್ಬ ತರ್ಲೆ ಫೋನ್‌ ಮಾಡಿ ಬಾಯಿಗೆ ಬಂದ ಹಾಗೆ ಬೈದಿದ್ದ. ಅಧಿಕಾರಿಗಳು ಅವನ ವಿರುದ್ಧ ದೂರು ನೀಡಿದ್ದರು. ಸಾಕ್ಷಿಯಾಗಿ ನ್ಯಾಯಾಲಕ್ಕೆ ಬರಬೇಕು ಎಂದು ನ್ಯಾಯಾಲಯ ಹೇಳಿತ್ತು. ಕೋರ್ಟ್‌ ಆದೇಶಕ್ಕೆ ತಲೆಬಾಗಿ ಬಂದಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net