

ಬೆಂಗಳೂರು: ಬಿಜೆಪಿಮುಕ್ತ ರಾಜ್ಯ ಮಾಡಲು ನಾವೆಲ್ಲ ಪ್ರತಿಜ್ಞೆ ಮಾಡಬೇಕಿದೆ ಎಂದು ಕಾಂಗ್ರೆಸ್ ಕಾರ್ಯರ್ತರಿಗೆ ಕರೆ ನೀಡಿದ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ನಾನು ವಿಧಾನಸೌಧದ ಮೆಟ್ಟಿಲ ಕಲ್ಲಾಗುತ್ತೇನೆ, ನೀವು ಆ ಚಪ್ಪಡಿ ಕಲ್ಲಿನ ಮೇಲೆ ನಡೆದು ವಿಧಾನಸೌಧದ ಮೂರನೇ ಮಹಡಿ ತಲುಪಿದರೆ ಸಾಕು. ಅದರಲ್ಲಿ ತೃಪ್ತಿ ಪಡುತ್ತೇನೆ’ ಎಂದರು.
ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಅಧ್ಯಕ್ಷ ಸ್ಥಾನದ ಹಂಬಲ ಇಲ್ಲ. ಆದರೆ ಸವಾಲು ಎದುರಿಸುವ ಉತ್ಸಾಹವಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದೇ ನನ್ನ ಪ್ರಮುಖ ಗುರಿ ಎಂದು ಹೇಳಿದರು.
ಕೆಲವರು ನನ್ನನ್ನು ಕನಕಪುರ ಬಂಡೆ ಅಂತಾರೆ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಬಂಡೆಗೆ ಉಳಿ ಪೆಟ್ಟು ಬಿದ್ದರೆ ಅಡಿಪಾಯದ ಕಲ್ಲಾಗುತ್ತದೆ. ಇನ್ನೂ ಪೆಟ್ಟು ಬಿದ್ದರೆ ಚಪ್ಪಡಿಯಾಗುತ್ತದೆ. ಇನ್ನೂ ಹೆಚ್ಚು ಪೆಟ್ಟು ಬಿದ್ದರೆ ಬಾಗಿಲ ಕಂಬವಾಗುತ್ತದೆ. ಮತ್ತೂ ಬಿದ್ದರೆ ದೇವರ ಶಿಲೆಯಾಗುತ್ತದೆ. ನಾನು ಶಿಲೆಯಾಗಲು ಬಯಸುವುದಿಲ್ಲ. ಬದಲಿಗೆ ವಿಧಾನಸೌಧದ ಮೆಟ್ಟಿಲ ಕಲ್ಲಾಗುತ್ತೇನೆ ಎಂದರು.
ಬಿಜೆಪಿಯವರು ಕುತಂತ್ರ ಮಾಡಿ ನನ್ನನ್ನು ತಿಹಾರ್ ಜೈಲಿಗೆ ಕಳಿಸಿದರು. ಇಲ್ಲಸಲ್ಲದ ಆರೋಪ ಮಾಡಿದರು. ಈ ವೇಳೆ ಡಿ.ಕೆ.ಶಿವಕುಮಾರ್ ರಾಜಕೀಯ ಬದುಕು ಮುಗಿದೇ ಹೋಯಿತು ಎನ್ನುವ ಮಾತು ಕೇಳಿಬಂದಾಗ ಸೋನಿಯಾ ಗಾಂಧಿ ಜೈಲಿಗೆ ಬಂದು ಧೈರ್ಯ ತುಂಬಿದರು. ಅವರು ಯಾವ ಸಂದರ್ಭದಲ್ಲಿ ನನಗೆ ಈ ಶಕ್ತಿ ಕೊಟ್ಟರು ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಈಗ ಇಲ್ಲಿಯವರೆಗೆ ಬಂದು ನಿಲ್ಲಲು ಸಾಧ್ಯವಾಯಿತೆಂದರು.
ನಾನು ಹಲವು ತೊಂದರೆ ಅನುಭವಿಸಿದ್ದೇನೆ. ಎಲ್ಲ್ಲೂ ಪಕ್ಷಕ್ಕೊಸ್ಕರ. ನಾನು ಯಾರಿಗಾದರೂ ಅನ್ಯಾಯ ಮಾಡಿದ್ದರೆ ಶಿಕ್ಷೆ ಸ್ವೀಕರಿಸಲು ಸಿದ್ಧ. ನನಗೆ ಅಧಿಕಾರ ಕೊಡದಿದ್ದಾಗಲೂ ಪಕ್ಷದ ಬಗ್ಗೆ ಚಕಾರ ಎತ್ತಲಿಲ್ಲ್ಲ ಇದೇ ನನ್ನ ಬದ್ಧತೆ. ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರು ಕೊಟ್ಟಿರುವ ಶಕ್ತಿ ನನ್ನ ರಕ್ತದ ಕಣ, ಕಣದಲ್ಲಿದ್ದು ನಾನು ಬದುಕಿರುವವರೆಗೂ ಇದನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಬಂಗಾರಪ್ಪ, ಎಸ್.ಎಂ ಕೃಷ್ಣ, ಧರಂಸಿಂಗ್, ಸಿದ್ದರಾಮಯ್ಯ ಸರ್ಕಾರ ಹಾಗೂ ರಾಹುಲ್ ಗಾಂಧಿ ಅವರ ಆದೇಶದ ಮೇರೆಗೆ ಕುಮಾರಸ್ವಾಮಿ ಸಂಪುಟದಲ್ಲೂ ಕೆಲಸ ಮಾಡಿದ್ದೇನೆ. ಆದರೆ ನಾನು ಯಾರಿಗೂ ದೊ್ರೕಹ ಬಗೆದಿಲ್ಲ ಎಂದ ಅವರು ಅವಕಾಶ ಸಿಗುವುದಿಲ್ಲ್ಲ ಅದನ್ನು ನೀವೇ ಸೃಷ್ಟಿಸಿಕೊಳ್ಳಬೇಕು ಎಂದು ಇಂದಿರಾ ಗಾಂಧಿ ಯುವಕರಿಗೆ ಸಂದೇಶ ಕೊಟ್ಟ್ಟು. ಅದನ್ನು ನಾನು ಪಾಲಿಸುತ್ತೇನೆ ಎಂದು ತಿಳಿಸಿದರು.
ಹೋಗುವವರಿದ್ದರೆ ಬೀಳ್ಕೊಡುವೆ
ಯಾವ ಹಿಂಬಾಲಕರೂ ನನಗೆ ಬೇಡ. ನಮ್ಮ ನೆರಳನ್ನೇ ನಾವು ನಂಬಲಾಗುವುದಿಲ್ಲ. 20, 30 ವರ್ಷ ತಯಾರು ಮಾಡಿದ ನಾಯಕರು ಏನು ಮಾಡಿದರು ಎಂದು ನಾವು ನೋಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಆಪರೇಷನ್ ಕಮಲದ ಮೂಲಕ ಅನೇಕರು ಹೋದರು ಹೋಗಲಿ. ಇನ್ನೂ ಯಾರಾದರೂ ಹೋಗುವವರು ಹೋಗಲಿ, ಸಂತೋಷದಿಂದ ಬೀಳ್ಕೊಡುತ್ತೇವೆ. ಈ ಕಾರ್ಯಕರ್ತರು ಹಾಗೂ ನಾಯಕರಿಗೆ ಪಕ್ಷ ಕಟ್ಟುವ ಶಕ್ತಿ ಇದೆ ಎಂದರು.
ಕಾರ್ಯಕರ್ತರಿಗೆ ಸಲಹೆ
ಸಾಧುಕೋಕಿಲ ಗಾಯನ
ಚಲನಚಿತ್ರ ನಿರ್ದೇಶಕ ಸಾಧುಕೋಕಿಲ, ‘ಬೆಳಗುತಿದೆ ಜ್ಯೋತಿ ಕಾಂಗ್ರೆಸ್ ಜ್ಯೋತಿ... ಬೆಳಗುತಿದೆ ಜ್ಯೋತಿ ಭರವಸೆಯ ಜ್ಯೋತಿ, ಸಮತೆಯ ಸಾರುವ ಜ್ಯೋತಿ, ಒಲವನ್ನು ತೋರುವ ಜ್ಯೋತಿ...’ ಎಂದು ಹಾಡಿ ಕಾರ್ಯಕ್ರಮಕ್ಕೆ ಕಳೆಕಟ್ಟಿದರು.
ವಿಶೇಷತೆಗಳು
ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಪಕ್ಷ ಕಟ್ಟುವೆ
ನಮ್ಮ ಪಕ್ಷವನ್ನು ಮಾಸ್ ಬೇಸ್ನಿಂದ ಕೇಡರ್ ಬೇಸ್ ಪಾರ್ಟಿಯಾಗಿ ಪರಿವರ್ತಿಸಬೇಕಿದೆ. ಯಾವುದೇ ನಾಯಕನಾದರೂ ಆತ ತನ್ನ ಬೂತ್ ಮಟ್ಟ್ಟಂದ ಪ್ರತಿನಿಧಿಸಬೇಕು. ಇದಕ್ಕೆ ಕೇರಳ ಮಾಡೆಲ್ ಪ್ರೇರಣೆ. ನಾವೆಲ್ಲರೂ ಸೇರಿ ಎಲ್ಲರಿಗೂ ಸ್ಥಾನಮಾನ ಸಿಗುವಂತೆ ಕಾರ್ಯಕ್ರಮ ರೂಪಿಸೋಣ ಎಂದು ಡಿಕೆಶಿ ಮನವಿ ಮಾಡಿದರು.
ಖುರ್ಚಿ ಇಲ್ಲದ ವೇದಿಕೆ
ಕಾಂಗ್ರೆಸ್ ಸಭೆಗಳೆಂದರೆ ಹತ್ತಾರು ನಾಯಕರು ವೇದಿಕೆಯಲ್ಲಿ ಕೂರಲು ಪೈಪೋಟಿ, ಅವರ ಹಿಂದೆ ಕಾರ್ಯಕರ್ತರ ದಂಡು, ನೂಕುನುಗ್ಗಲು ಸಾಮಾನ್ಯ.ಆದರೆ, ಗುರುವಾರದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಖುರ್ಚಿಯನ್ನೇ ಇಟ್ಟಿರಲಿಲ್ಲ. ಅವರವರ ಜವಾಬ್ದಾರಿ ಇದ್ದಾಗಲಷ್ಟೇ ವೇದಿಕೆ ಮೇಲೇರಿ ಮಾತನಾಡಿ ಕೆಳಗಿಳಿದರು.
ರಾಹುಲ್- ಪ್ರಿಯಾಂಕಾ ಹಾರೈಕೆ
ಪದಗ್ರಹಣ ಸಮಾರಂಭ ನಡೆಯುವಾಗಲೇ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿದ ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್ ಮತ್ತು ಪ್ರಿಯಾಂಕಾ ವಾದ್ರಾ, ಪಕ್ಷದ ಕಾರ್ಯಕರ್ತರಿಗೆ ಚುಟುಕು ಸಂದೇಶ ನೀಡಿ, ಹೊಸ ತಂಡಕ್ಕೆ ಶುಭ ಹಾರೈಸಿದರು. ‘ಸಂಕಷ್ಟದ ಸಂದರ್ಭದಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿರುವ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು. ಪಕ್ಷದಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ. ನಿಮ್ಮ ಮುಂದಿನ ಕಾರ್ಯಗಳಿಗೆ ಶುಭವಾಗಲಿ’ ಎಂದು ರಾಹುಲ್ ಹಾರೈಸಿದರು. ‘ಅತ್ಯಂತ ಸಂಕೀರ್ಣ ಪರಿಸ್ಥಿತಿಯಲ್ಲಿ ಪಕ್ಷದ ಜವಾಬ್ದಾರಿಯನ್ನು ನೀವು ವಹಿಸಿಕೊಂಡಿದ್ದೀರಿ. ಎಂತಹ ಕಠಿಣ ಪರಿಸ್ಥಿತಿ ಬಂದರೂ ನಾವು ನಿಮ್ಮ ಜತೆಗೆ ನಿಲ್ಲುತ್ತೇವೆ. ನೀವು ಧೈರ್ಯದಿಂದ ಮುನ್ನುಗ್ಗಿ. ಪಕ್ಷವನ್ನು ಸದೃಢವಾಗಿ ಸಂಘಟಿಸಿ’ ಎಂದು ಪ್ರಿಯಾಂಕಾ ಹೇಳಿದರು.
ಡಿಕೆಶಿ ಅವರಿಗೆ ರಾಜಕೀಯ ಪ್ಯಾಶನ್. ಡೈನಾಮಿಸಂ, ಐಡಿಯಾ ಇರುವ ನಾಯಕ. ಅವಕಾಶ ಸೃಷ್ಟಿಸಿಕೊಳ್ಳುವುದು ಕರಗತ. ಹಿರಿಯರೆಲ್ಲರ ಸಹಕಾರ ಬಳಿಸಿಕೊಂಡರೆ ಅವರು ವಂಡರ್ ಮಾಡಬಹುದು. | ಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುಳ್ಳು ಹೇಳಿ ಬಿಜೆಪಿಯವರು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದರ ಹಿಂದೆ ಆರ್ಎಸ್ಎಸ್ಇದೆ. ಎಲ್ಲಿವರೆಗೂ ಆರ್ಎಸ್ಎಸ್, ಮೋದಿ, ಅಮಿತ್ ಷಾ ಅವರನ್ನು ಹತ್ತಿಕ್ಕುವುದಿಲ್ಲಮೊ ಅಲ್ಲಿವರೆಗೂ ದೇಶದ ಯುವಕರಿಗೆ ಭವಿಷ್ಯವಿಲ್ಲ. | ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಸದಸ್ಯ ಇನ್ಮುಂದೆ ಯಾವುದೇ ಕಾರಣಕ್ಕೂ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಬೇಡ. ಚುನಾವಣೆಗಳನ್ನು ಏಕಾಂಗಿಯಾಗಿ ಎದುರಿಸೋಣ. ಪಕ್ಷ ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡಿದ್ದು ಸೂಕ್ತವಾಗಿದೆ. ಅವರಿಗೆ ಛಲ ಇದೆ, ಗುರಿ ಇದೆ. ಅವರು ಬಯಸಿದ್ದನ್ನು ಮಾಡುತ್ತಾರೆ. | ದಿನೇಶ್ ಗುಂಡೂರಾವ್ ಕೆಪಿಸಿಸಿ ನಿಕಟಪೂರ್ವ ಅಧ್ಯಕ್ಷ ಕರೊನಾ ಬಂದಾಗಿನಿಂದ ಮೋದಿ ಮನೆಯಿಂದ ಹೊರಬಂದಿಲ್ಲ್ಲ ನಾವೆಲ್ಲ ಜನರ ಮಧ್ಯೆ ಹೋಗಿ ಕೆಲಸ ಮಾಡುತ್ತೇವೆ. ಇಂಥವರಿಂದ ತ್ಯಾಗ ಬಲಿದಾನ ಸಾಧ್ಯವೇ. ಗಾಂಧಿ ಕೊಂದವರ ಹೆಸರನ್ನೇ ಬಿಜೆಪಿ ನಾಯಕರು ವೈಭವೀಕರಿಸುತ್ತಾರೆ. ಇಲ್ಲಿನ ರಸ್ತೆಗೆ ಆತನ ಹೆಸರು ಇಡೋಕೆ ಹೊರಟಿದ್ದಾರೆ. | ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ