ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ: ಡಿಸಿಎಂ ಡಿ.ಕೆ. ಶಿವಕುಮಾರ್​

Dk Shivakumar
Published on

ಬೆಂಗಳೂರು: ಬೆಂಗಳೂರು ನಗರವನ್ನು ಬ್ರ್ಯಾಂಡ್​ ಮಾಡಲು 42 ಪ್ರಮುಖರನ್ನ ಆಹ್ವಾನಿಸಿ ಅವರ ಸಲಹೆಗಳನ್ನು ಕೇಳಲಾಗಿದೆ. ಮಗರವನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲು ಸರ್ಕಾರಿ ಅಧಿಕಾರಿಗಳು ಹಾಗೂ ತಜ್ಞರ ಸಮಿತಿ ಒಂದನ್ನು ರಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ತಿಳಿಸಿದ್ಧಾರೆ.

ಬ್ರ್ಯಾಂಡ್​ ಬೆಂಗಳೂರು ಕುರಿತು ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿಕೆಶಿ ರಾಜಧಾನಿಯ ಅಭಿವೃದ್ಧಿ ಕುರಿತು ಸಮಗ್ರವಾಗಿ ಪ್ರಮುಖರ ಜೊತೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ಧಾರೆ.

ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ನೀಲಿನಕ್ಷೆ ಒಂದನ್ನು ಸಿದ್ದಪಡಿಸಬೇಕಿದೆ. ಶೀಘ್ರದಲ್ಲೇ ಸರ್ಕಾರಿ ಅಧಿಕಾರಿಗಳು ಹಾಗೂ ತಜ್ಞರ ಸಮಿತಿ ಒಂದನ್ನು ರಚಿಸಲಾಗುವುದು. ರಾಜಧಾನಿಯ ಅಭಿವೃದ್ಧಿಯ ಕುರಿತಾಗಿ ವಿವಿಧ ಕ್ಷೇತ್ರಗಳ ಪ್ರಮುಖರ ಜೊತೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೈಗಾರಿಕೋದ್ಯಮಿಗಳು, ಮಾಹಿತಿ-ಜೈವಿಕ ತಂತ್ರಜ್ಞಾನ, ರಿಯಲ್​ ಎಸ್ಟೇಟ್​, ಸೇರಿದಂತೆ ಹಲವು ಕ್ಷೇತ್ರದ 42 ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಇವರೆಲ್ಲರೂ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ.

ಸಂಚಾರ ದಟ್ಣಣೆ ಹೆಚ್ಚಿರುವ ರಸ್ತೆಗಳ ಅಗಲೀಕರಣ, ಮೆಟ್ರೋ ರೈಲು ಮಾರ್ಗಗಳ ವಿಸ್ತರಣೆ, ತ್ಯಾಜ್ಯ ನಿರ್ವಹಣೆ, ಕೊಳಚೆ ನೀರು ಶುದ್ಧೀಕರಿಸಿ ಮರುಬಳಕೆ, ಕೊಳಗೇರಿಗಳ ಅಭಿವೃದ್ದಿ, ಉಪನಗರಗಳ ನಿರ್ಮಾಣ ಸೇರಿದಂತೆ ಅನೇಕ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಉಪನಗರ ರೈಲು ಯೋಜನೆಯೆ ಕಾಮಗಾರಿ ಆರಂಭ ಆಗದಿರುವುದಕ್ಕೆ ಕೆಲವರು ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಬಾಕಿ ಉಳಿದಿರುವ ನೈಸ್​ ರಸ್ತೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ರಿಂಗ್​ ರೋಡ್​ ಮಾದರಿಯಲ್ಲಿ ಬಳಸಿಕೊಳ್ಳುವಂತೆ ಸಲಹೆಗಳು ಸಹ ಕೇಳಿ ಬಂದಿದೆ. ಮುಂದಿನ ವಾರ ಮತ್ತೊಮ್ಮೆ ಸಭೆ ನಡೆಸಲಾಗುವುದು. ಇದಕ್ಕಾಗಿ ಪ್ರತ್ಯೇಕ ವೆಬ್​ಸೈಟ್​ ಒಂದನ್ನು ತೆರೆದು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಆ ಬಳಿಕ ಬ್ರ್ಯಾಂಡ್​ ಬೆಂಗಳೂರು ಯೋಜನೆ ರೂಪಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸಭೆ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net