

ಕುಣಿಗಲ್/ ಹುಲಿಯೂರುದುರ್ಗ: ಹುಲಿಯೂರುದುರ್ಗ ಹೋಬಳಿಯ ಹಂಗರಹಳ್ಳಿ ಶ್ರೀ ವಿದ್ಯಾಚೌಡೇಶ್ವರಿ ಮಹಾ ಸಂಸ್ಥಾನ ಮಠದಲ್ಲಿ ಶನಿವಾರ ನವರಾತ್ರಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮಹಾ ಚಂಡಿಕಾ ದುರ್ಗಾ ಹೋಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುವಾರ್, ಪತ್ನಿ ಉಷಾ ಶಿವಕುಮಾರ್ ಭಾಗವಹಿಸಿ ವಿಶೇಷ ಪೂಜೆ ನೆರವೇರಿಸಿದರು.
ಬೆಳಗ್ಗೆ 9.30ಕ್ಕೆ ಮಠಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಮತ್ತವರ ಕುಟುಂಬ ಹೋಮದಲ್ಲಿ ಭಾಗವಹಿಸಿ, ಮಧ್ಯಾಹ್ನ 2ರವರೆಗೆ ಮಠದಲ್ಲೇ ಇದ್ದರು. ವಿದ್ಯಾಚೌಡೇಶ್ವರಿ ದೇವಿಯಲ್ಲಿ ಶಾಸ್ತ್ರ ಕೇಳಿದ್ದು ವಿಶೇಷವಾಗಿತ್ತು. ಮಠದ ಬಾಲ ಮಂಜುನಾಥ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಡಿಕೆಶಿ ದಂಪತಿ ಜತೆಗೆ ಕುಣಿಗಲ್ ಶಾಸಕರ ಕುಟುಂಬವೂ ಪಾಲ್ಗೊಂಡಿತ್ತು.
ಎರಡನೇ ಬಾರಿ ಭೇಟಿ: ಈ ಹಿಂದೆ ಮನೆಯ ಮೇಲೆ ಮೊದಲ ಬಾರಿ ಐಟಿ ದಾಳಿ ನಡೆದಾಗ ಚೌಡೇಶ್ವರಿ ಕ್ಷೇತ್ರಕ್ಕೆ ಬಂದು ಮಹಾಚಂಡಿಕಾ, ರುದ್ರಹೋಮ ನೇರವೇರಿಸಿದ್ದರು. ನಂತರ ಕಷ್ಟಗಳು ದೂರವಾಗಿ ಕೆಪಿಸಿಸಿ ಪಟ್ಟ ಅಲಂಕರಿಸಿದರು. ಸಿಬಿಐ ದಾಳಿ ನಂತರ ಮತ್ತೆ ಡಿಕೆಶಿ ಇಲ್ಲಿಗೆ ಬಂದು ಪೂಜೆ ನೇರವೇರಿಸಿದ್ದಾರೆ. ಪೂಜೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುವಾರ್, ಸ್ವಾಮೀಜಿ ಅವರು ನವರಾತ್ರಿ ಅಂಗವಾಗಿ ಮಠದಲ್ಲಿ ನಿತ್ಯ ವಿಶೇಷ ಹೋಮ, ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮೊದಲ ದಿನವೇ ನಿಮ್ಮ ಹೆಸರಿನಲ್ಲಿ ಪೂಜಾ ಕಾರ್ಯ ನೇರವೇರಿಸಲಾಗುತ್ತದೆ. ನೀವು ಆಗಮಿಸಬೇಕು ಎಂದು ಆಹ್ವಾನ ನೀಡಿದ್ದರು. ಹಾಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ ಎಂದರು.
ವಿದ್ಯಾಚೌಡೇಶ್ವರಿ ದೇವಿ ಶಕ್ತಿ ದೇವತೆಯಾಗಿದ್ದು, ನವರಾತ್ರಿಯಲ್ಲಿ ಹೋಮ ನೆರವೇರಿಸಿದರೆ ರಾಜ್ಯ, ದೇಶಕ್ಕೆ ಒಳ್ಳೆಯದಾಗಲು ಹಾಗೂ ಜನರ ಕಷ್ಟಗಳು ನಿವಾರಣೆಯಾಗುತ್ತದೆ ಎಂಬ ದೃಷ್ಟಿಯಿಂದ ಸ್ವಾಮೀಜಿ ಹೋಮ ನಡೆಸಿದ್ದಾರೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಪುರಸಭೆ ಸದಸ್ಯರಾದ ರಂಗಸ್ವಾಮಿ, ನಾಗೇಂದ್ರ, ನಾಗರಾಜು, ದೇವರಾಜು, ಜಯಲಕ್ಷ್ಮೀ, ಹುತ್ರಿ ವಿಎಸ್‌ಎಸ್‌ಎನ್ ಅಧ್ಯಕ್ಷ ಬೋರೇಗೌಡ, ಉಪಾಧ್ಯಕ್ಷ ಹಾಲವಾಗಲ ಸ್ವಾಮಿ, ಮುಖಂಡರಾದ ಕರಿಗೌಡ, ಚಂದನ್, ಚಂದ್ರು, ಅನೂಪ್ ಇದ್ದರು.
ಡಿಕೆಶಿ ದರ್ಶನಕ್ಕೆ ಬಂದ ಮುಖಂಡರು: ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಮಠಕ್ಕೆ ಆಗಮಿಸಿ ಡಿಕೆಶಿ ದರ್ಶನಕ್ಕೆ ಕಾದು ಕುಳಿತಿದ್ದರು. ಅಧ್ಯಕ್ಷ ಆಕಾಂಕ್ಷಿಗಳಾದ ರಂಗಸ್ವಾಮಿ, ಎಸ್.ಕೆ.ನಾಗೇಂದ್ರ, ಉಪಾಧ್ಯಕ್ಷ ಆಕಾಂಕ್ಷಿಯಾದ ಜಯಲಕ್ಷ್ಮೀ, ಪುರಸಭೆ ಸದಸ್ಯರಾದ ನಾಗರಾಜು, ಮಲ್ಲಿಪಾಳ್ಯ ಶ್ರೀನಿವಾಸ್, ದೇವರಾಜು ಸೇರಿ ಸದಸ್ಯೆಯರ ಪತಿಯರೂ ಕೂಡಾ ಆಗಮಿಸಿ ಡಿಕೆಶಿ ಅವರನ್ನು ಭೇಟಿ ಮಾಡಿದರು. ಕೆಲವು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ವಾತ್ರ ಕಾಯದೆ ಮಧ್ಯದಲ್ಲೇ ತೆರೆಳಿದರು.