

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 26 ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿರಿಯ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ವರ ಅಧ್ಯಕ್ಷತೆಯಲ್ಲಿ ಮಾರ್ಚ್ 23 ಮತ್ತು 24 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರುಗಲಿದೆ.
ಇಡೀ ಸಾಹಿತ್ಯದ ಸಂಭ್ರಮವನ್ನು ಆಮೃತ ಸೋಮೇಶ್ವರ ನಗರ, ಮಿಜಾರು ಆನಂದ ಆಳ್ವ ವೇದಿಕೆ, ಕೇಶವ ಕುಡ್ಲ ಪುಸ್ತಕ ಮಳಿಗೆ, ಕೆ ಟಿ ಗಟ್ಟಿ ಮಹಾದ್ವಾರ ಹೆಸರುಗಳಲ್ಲಿ ಆಯೋಜಿಸಲು ಸಮಿತಿ ನಿರ್ಯಿಯಿಸಿದೆ. ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಸಮ್ಮೇಳನ ಉದ್ಘಾಟಿಸುವರು. ದಕ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಧ್ವಜಾರೋಹಣ ನೆರವೇರಿಸುವರು ಎಂದು ಕಸಾಪ ದಕ ಜಿಲ್ಲಾ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು ಹತ್ತು ಪುಸ್ತಕ ಮಳಿಗೆಗಳು , ಖಾದಿ ಹಾಗೂ ಗ್ರಾಮೋದ್ಯೋಗ, ಮಹಿಳಾ ಸಬಲೀಕರಣ ಉತ್ಪನ್ನಗಳ ಪ್ರದರ್ಶನ ಸಹಿತ 60 ವಿವಿಧ ್ಮಮಳಿಗೆಗಳನ್ನು ನಿರೀಕ್ಷಿಸಲಾಗಿದೆ. ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ನೂತನ ಪುಸ್ತಕಗಳನ್ನು ಬಿಡುಗಡೆ ಮಾಡುವರು. ಈಗಾಗಲೇ ಹತ್ತು ಪುಸ್ತಕ ಬಿಡುಗಡೆಗೆ ಪ್ರಕಾಶಕರು ಹಾಗೂ ಬರಹಗಾರರು ನೊಂದಣಿ ಮಾಡಿದ್ದಾರೆ. ಹೆಚ್ಚಿನ ಪುಸ್ತಕಗಳನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಆನಂದ ಸಿ.ಎಲ್ ಮುಂತಾದವರು ಭಾಗವಹಿಸುವರು. ಮಾಜಿ ಕಸಾಪ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ್ಪುಸ್ತಕಗಳನ್ನು ಬಿಡುಗಡೆ ಮಾಡುವರು. ಅವರಿಗೆ ಜೊತೆಯಾಗಿ ಜಿಪಂ ಮುಖ್ಯಾಧಿಕಾರಿ ಆನಂದ್ ಕೆ ಹಾಗೂ ಮಹಾನಗರ ಪಾಲಿಕೆಯ ಮುಖ್ಯಾಧಿಕಾರಿ ಆನಂದ ಎಲ್ ಇರುವರು. ಹೆಚ್ಚಿನ ವಿದ್ಯಾರ್ಥಿಗಳನ್ನು ಕನ್ನಡದ ಸಂಭ್ರಮಕ್ಕೆ ಜೊತೆಯಲ್ಲಿ ಸೇರಿಕೊಳ್ಳಲಾಗಿದೆ. ಇದಕ್ಕಾಗಿ ಹೆಚ್ಚಿನ ಸಾಂಸ್ಕೃತಿಕ ಪ್ರಸ್ತುತಿಯಲ್ಲಿ ವಿದ್ಯಾರ್ಥಿಗಳು ಇರುವಂತೆ ಆಯೋಜನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಮಾಧವ ಎಂ.ಕೆ, ಕೇಂದ್ರೀಯ ಮಾರ್ಗದರ್ಶನ ಮಂಡಳಿ ಸದಸ್ಯ ಡಾ.ಮುರಳಿ ಮೋಹನ್ ಚೂಂತಾರು, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ವಿನಯ ಆಚಾರ್, ಜಿಲ್ಲಾ ಸಮ್ಮೇಳನ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ ರೇವಣ್ಕರ್, ಕಾರ್ಯದರ್ಶಿ ಪುಷ್ಪರಾಜ್ ಕೆ., ಮಾಧ್ಯಮ ಸಮಿತಿ ಸಂಚಾಲಕ ರೇಮಂಡ್ ಡಿ.ಕುನ್ಹ, ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.
…………
ವಿವಿಧ ಗೋಷ್ಠಿ
ಕರಾವಳಿಯ ಸಾಹಿತ್ಯ ಪರಂಪರೆ ಅವಲೋಕನ, ದಕ ಜಿಲ್ಲೆಯಲ್ಲಿ ಕನ್ನಡದ ಅಸ್ಮಿತೆ, ಮಾಧ್ಯಮ- ದಿಕ್ಕು ದೆಸೆ, ವೈದ್ಯಕೀಯ ಸಾಹಿತ್ಯ ಮತ್ತು ಸಾಮಾಜಿಕ ಸ್ವಾಸ್ಥೃ, ಹಾಸಭಾಸ- ನಗೆ ಸಮಯ ಮುಂತಾದ ಗೋಷ್ಠಿಗಳು, ಸಮ್ಮೇಳನಾಧ್ಯಕ್ಷರ ಜತೆ ಸಂವಾದ, ಸನ್ಮಾನ, ಸಮಾರಂಭ, ಸಾಂಸ್ಕೃತಿಕ ವೈವಿಧ್ಯ ಇರುವುದು ಎಂದು ಡಾ. ಎಂ.ಪಿ.ಶ್ರೀನಾಥ್ ಹೇಳಿದರು.