

ಮಂಗಳೂರು: ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರು ದೈಹಿಕ ಕ್ಷಮತೆ ಕಾಯ್ದುಕೊಳ್ಳುವುದು ಅವಶ್ಯ ಎಂದು ಡಿಸಿಪಿ ಸಿದ್ಧಾರ್ಥ ಗೋಯೆಲ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ 2023 ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕೆಲಸದ ಒತ್ತಡದ ನಡುವೆ ಮಾನಸಿಕ ಒತ್ತಡದಿಂದಾಗಿ ದೇಹಕ್ಕೆ ಹೆಚ್ಚಿನ ರೋಗಗಳು ಬರುತ್ತದೆ. ಇಂತಹ ಕ್ರೀಡಾಕೂಟಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿಸುತ್ತದೆ ಎಂದರು.
ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಮಾತನಾಡಿ, ನಮ್ಮ ದಿನನಿತ್ಯದ ಕೆಲಸದ ಜೊತೆಗೆ ಒಂದಷ್ಟು ದಿನ ನಮ್ಮ ಮನಸ್ಸನ್ನು ಉಲ್ಲಸಿತರಾಗಿಸಲು, ಒತ್ತಡವನ್ನು ನಿಯಂತ್ರಿಸಲು ಈ ಕ್ರೀಡಾಕೂಟ ಅವಶ್ಯಕ. ಕ್ರೀಡೆಯಲ್ಲಿ ವ್ಯಕ್ತಿ ಗೆಲ್ಲುವುದಲ್ಲ, ಕ್ರೀಡೆ ಗೆಲ್ಲಬೇಕು ಎಂದರು.
ಈ ಕಛೇರಿ ಅಧೀಕ್ಷಕ ಗೋಪಿನಾಥ್ ಬಿ.ಎನ್. ಸ್ವಾಗತಿಸಿದರು. ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ. ಇವರು ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್ ಸೆರಾ ವಂದಿಸಿದರು. ಜಿಲ್ಲಾ ಗೃಹರಕ್ಷಕದಳದ 50 ಮಂದಿ ಗೃಹರಕ್ಷಕರು ಆಯ್ಕೆಯಾಗಿ ಪಶ್ಚಿಮ ವಲಯದ ಕ್ರೀಡಾಕೂಟಕ್ಕೆ ಆಯ್ಕೆಯಾದರು.