

ಮಂಗಳೂರು: ಜಿಲ್ಲೆಯ ಮತದಾರರು ತಮ್ಮ ಚುನಾವಣಾ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಚುನಾವಣಾ ಸುಧಾರಣೆಗಳು ಮತ್ತು ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಗುರುತಿನ ಚೀಟಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಜೋಡಣೆ ಮಾಡಬೇಕಿದೆ. ಅದರಂತೆ ಎಪಿಕ್ ಕಾರ್ಡ್ ಹೊಂದಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಬೇಕು. ಪ್ರತಿಯೊಬ್ಬ ಮತದಾರರು ನಮೂನೆ 6-ಬಿಯಲ್ಲಿ ವೆಬ್‌ಸೈಟ್:(www.nvsp.in) ಮೂಲಕ ಅಥವಾ ವೋಟರ್ ಹೆಲ್ಪ್‌ಲೈನ್ ಆ್ಯಪ್, ಗರುಡ ಆ್ಯಪ್ ಹಾಗೂ ಬೂತ್ ಮಟ್ಟದ ಅಧಿಕಾರಿಗೆ ಆಧಾರ್ ಸಂಖ್ಯೆ ನೀಡಿ ಚುನಾವಣಾ ಗುರುತಿನ ಚೀಟಿಗೆ ಜೋಡಣೆ ಮಾಡಬಹುದಾಗಿದೆ ಎಂದರು.
ಆಧಾರ್ ಕಾರ್ಡ್ ಇಲ್ಲದಿದ್ದರೆ ನರೇಗಾ ಉದ್ಯೋಗ ಕಾರ್ಡ್, ಭಾವಚಿತ್ರ ಹೊಂದಿದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನ ಪಾಸ್ ಪುಸ್ತಕ, ಪ್ರಧಾನ ಮಂತ್ರಿ ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್, ವಾಹನ ಪರವಾನಗಿ, ಪಾನ್ ಕಾರ್ಡ್, ಆರ್‌ಜಿಐ ಹಾಗೂ ಎನ್‌ಪಿಆರ್‌ನ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‌ಪೋರ್ಟ್, ಪಿಂಚಣಿ ದಾಖಲಾತಿ, ಸರ್ವೀಸ್ ಗುರುತಿನ ಚೀಟಿ, ಶಾಸಕ ಹಾಗೂ ಸಂಸದರಿಂದ ಪಡೆದ ಅಧೀಕೃತ ಗುರುತಿನ ಚೀಟಿ ಹಾಗೂ ಯುಡಿಐಡಿ ಕಾರ್ಡ್ ದಾಖಲೆಯನ್ನು ನೀಡಿ ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.