

ಮಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳಿಂದ ದೇಶ ದಿವಾಳಿಯಾಗುತ್ತದೆ ಎಂದು ಟೀಕಿಸುತ್ತಿದ್ದ ಬಿಜೆಪಿ ಮುಂದಿನ ಲೋಕಸಭೆ, ಹಾಗೂ ಪಂಚರಾಜ್ಯ ಚುನಾವಣೆಗಳನ್ನು ಗಮನದಲ್ಲಿಟ್ಟು ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಮಾದರಿಯ ಕೊಡುಗೆಗಳನ್ನು ಘೋಷಿಸುತ್ತಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಟಾಂಗ್ ವ್ಯಂಗ್ಯವಾಡಿದ್ದಾರೆ.ಪದೇಪದೆ ‘ಗುಜರಾತ್ ಮಾದರಿ’ ಎನ್ನುತ್ತಿದ್ದ ಬಿಜೆಪಿಗೆ ಕೂಡ ಇಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರವೇ ಮಾದರಿ. ಕಳೆದ ಒಂಭತ್ತು ವರ್ಷದಿಂದ ಎಲ್‌ಪಿಜಿ ದರ ಇಳಿಸುವಂತೆ ಜನರು, ರಾಜಕೀಯ ಪಕ್ಷಗಳು ಪರಿಪರಿಯಾಗಿ ಕೇಳಿಕೊಂಡರೂ ಕ್ಯಾರೇ ಅನ್ನದ ಬಿಜೆಪಿ ಈಗ 200 ರೂ. ಇಳಿಸಿದೆ. ಬೆಲೆ ಕಡಿತ ಕುರಿತು ಗ್ಯಾಸ್ ಕಂಪನಿಗಳು ಹಾಗೂ ಡೀಲರ್‌ಗಳು ಪ್ರಧಾನಿಯವರ ಫೋಟೋ ಫಲಕವನ್ನು ಅಳವಡಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿರುವುದು ಜನವಿರೋಧಿಯಾಗಿದ್ದು, ಕಾಂಗ್ರೆಸ್ ಖಂಡಿಸುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಟಾರ್ಚ್ ಹಿಡಿದು ಹುಡುಕಬೇಕಾದ ಪರಿಸ್ಥಿತಿ ಇದೆೆ ಎಂದು ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರು ಹೇಳುತ್ತಿದ್ದರು. ಆದರೆ ಇಂದು ರಾಜ್ಯದಲ್ಲಿ ಬಿಜೆಪಿಯನ್ನೇ ಟಾರ್ಚ್‌ಲೈಟ್ ಹಾಕಿ ಹುಡುಕುವ ಪರಿಸ್ಥಿತಿ ಬಂದಿದೆ ಎಂದರು.ಮುಖಂಡರಾದ ಎ.ಸಿ.ಭಂಡಾರಿ, ಅಬ್ದುಲ್ ಸಲೀಂ, ಸುರೇಂದ್ರ ಕಂಬಳಿ, ಪುರುಷೋತ್ತಮ ಚಿತ್ರಾಪುರ, ಸುಭಾಷ್ ಶೆಟ್ಟಿ ಕೊಳ್ನಾಡ್, ನೀರಜ್ ಚಂದ್ರಪಾಲ್, ಸಲೀಂ ಮುಕ್ಕ, ಲಾರೆನ್ಸ್ ಡಿಸೋಜ, ಜಯಶೀಲ, ವಿಕಾಸ್ ಶೆಟ್ಟಿ, ನಝೀರ್ ಬಜಾಲ್ ಸುದ್ದಿಗೋಷ್ಠಿಯಲ್ಲಿದ್ದರು.------ಸೌಜನ್ಯಾ ಹತ್ಯೆ ಮರುತನಿಖೆಗೆ ಒತ್ತಾಯಸೌಜನ್ಯಾ ಹತ್ಯೆಯ ಮರುತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ನಿಲುವು ಕೂಡ ಆಗಿದೆ. ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಉಜಿರೆಯಲ್ಲಿ ನಡೆದ ಹೋರಾಟಗಾರರ ಸಭೆಯಲ್ಲಿ ಸೌಜನ್ಯಾಳ ತಾಯಿ, ಕುಟುಂಬ ಆಗಮಿಸಿದ್ದು ಗಮನಕ್ಕೆ ಬಂದಿರಲಿಲ್ಲ. ಅವರಿಗೆ ವೇದಿಕೆ ಏರಲು ಅಡ್ಡಿಪಡಿಸಿರುವುದು ಜಾಲತಾಣಗಳ ಮೂಲಕ ಬಳಿಕ ತಿಳಿಯಿತು ಎಂದು ಹರೀಶ್ ಕುಮಾರ್ ಸ್ಪಷ್ಟಪಡಿಸಿದರು.