ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಜ್ಜು- ಬೊಮ್ಮಾಯಿ, ಕಾಗೇರಿ ಉಪಸ್ಥಿತಿಯಲ್ಲಿ ಬಿಜೆಪಿ ದಕ ಕೋರ್ ಕಮಿಟಿ ಚರ್ಚೆ

bjp core committee meeting
ಮಂಗಳೂರು ನಗರದಲ್ಲಿ ಗುರುವಾರ ನಡೆದ ಬಿಜೆಪಿ ದಕ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಕೋರ್ ಕಮಿಟಿಯ ಸದಸ್ಯರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಸುನಿಲ್ ಕುಮಾರ್, ಅವಿಭಜಿತ ದ.ಕ.ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಬಿಜೆಪಿ ರಾಜ್ಯಾಧ್ಯಕ್ಷರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಈಗಿನಿಂದಲೇ ಸಜ್ಜುಗೊಳಿಸುವುದು, ಪಕ್ಷದ ಅಭಿಯಾನಗಳನ್ನು ಯಶಸ್ಸುಗೊಳಿಸುವುದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸಹಿತ ವಿವಿಧ ವಿಷಯಗಳ ಕುರಿತು ನಗರದಲ್ಲಿ ಗುರುವಾರ ಜರುಗಿದ ಬಿಜೆಪಿ ದಕ್ಷಿಣ ಕನ್ನಡ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಯಿತು.
ಪಕ್ಷದ ರಾಜ್ಯಾಧ್ಯಕ್ಷರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಕೋರ್ ಕಮಿಟಿಯ ಸದಸ್ಯರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಸುನಿಲ್ ಕುಮಾರ್ ಭಾಗವಹಿಸಿರುವುದು ಈ ಬಾರಿಯ ಜಿಲ್ಲಾ ಕೋರ್ ಕಮಿಟಿಯ ವಿಶೇಷ.
ಜಿಲ್ಲಾ ಕೋರ್ ಕಮಿಟಿ ಸಭೆ ಪ್ರತಿ ತಿಂಗಳಿಗೊಮ್ಮೆ ನಡೆಯುತ್ತದೆ. ಈ ಸಭೆಯಲ್ಲಿ 3 ಅಥವಾ 4 ತಿಂಗಳಿಗೊಮ್ಮೆ ರಾಜ್ಯ ಕಮಿಟಿಯ ಪ್ರತಿನಿಧಿಗಳು ಬಾಗವಹಿಸುವ ಕ್ರಮವಿದೆ. ಈ ನಿಟ್ಟಿನಲ್ಲಿ ಗುರುವಾರ ನಡೆದ ಸಭೆಯಲ್ಲಿ ಸುನಿಲ್ ಕುಮಾರ್ ಮತ್ತು ಕಾಗೇರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದಲ್ಲಿ ಆಯೋಜಿಸಿದ ಎನ್‌ಇಪಿ ಸಭೆಯಲ್ಲಿ ಬಾಗವಹಿಸಲು ಆಗಮಿಸಿದ್ದರು. ಜಿಲಾ ್ಲಕೋರ್ ಕಮಿಟಿಯ ಸಭೆ ನಡೆಯುವ ಬಗ್ಗೆ ಮಾಹಿತಿ ಪಡೆದ ಅವರು ಕೂಡ ಸ್ಥಳೀಯ ನಾಯಕರ ಜತೆಗೆ ಸಭೆಗೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದರೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ ಎಂ. ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟ ಸಂಘಟನೆ, ಪಕ್ಷದ ನಮ್ಮ ಮಣ್ಣು ನಮ್ಮ ದೇಶ ಅಭಿಯಾನ, ಪ್ರಧಾನಿ ನರೇಂದ್ರ ಮೋದಿ ವರ ಜನ್ಮ ದಿನಾಚರಣೆ ಮುಂತಾದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನು ಸಭೆಯಲ್ಲಿ ನಡೆಸಲಾಯಿತು ಎಂದು ಪಕ್ಷದ ಮೂಲ ತಿಳಿಸಿದೆ.
ಅವಿಭಜಿತ ದ.ಕ.ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್, ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ, ಹರೀಶ್ ಪೂಂಜಾ, ಭಗೀರಥಿ ಮುರುಳ್ಯ, ಪ್ರತಾಪ್‌ಸಿಂಹ ನಾಯಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಶಾಸಕರಾದ ಸಂಜೀವ ಮಠಂದೂರು, ಕ್ಯಾ.ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ರವಿಶಂಕರ್ ಮಿಜಾರ್, ರಾಜೇಶ್ ಕಾವೇರಿ ಇದ್ದರು.
ರಾಜ್ಯ ಸರ್ಕಾರ ಜನವಿರೋಧಿಯಾಗಿ ವರ್ತಿಸುತ್ತಿದೆ. ಇದರ ವಿರುದ್ಧ ಜನತೆಗೆ ಮನವರಿಕೆ ಮಾಡಬೇಕು. ಸರ್ಕಾರದ ತಪ್ಪು ಹೆಜ್ಜೆಗಳನ್ನು ಪ್ರಬಲವಾಗಿ ವಿರೋಧಿಸುವ ಹೋರಾಟ ರೂಪುಗೊಳ್ಳಬೇಕು. ಈ ಬಗ್ಗೆ ಸೂಕ್ತ ಪ್ರತ್ಯುತ್ತರ ನೀಡಬೇಕು. ಈ ನಿಟ್ಟಿನಲ್ಲಿ ಮಂಡಲ ಮಟ್ಟಗಳಲ್ಲಿ ರೂಪುರೇಷೆ ಹಾಕಿಕೊಳ್ಳಬೇಕು ಎಂದು ಕೋರ್ ಕಮಿಟಿಯಲ್ಲಿ ಪ್ರಸ್ತಾಪಿಸಲಾಯಿತು.
ಕಳೆದ ಅವಧಿಯಲ್ಲಿ ನಡೆದ ಬಿಜೆಪಿ ಹೋರಾಟ, ಸಂಘಟನಾತ್ಮಕ ಚಟುವಟಿಕೆ, ಕಾರ್ಯಕ್ರಮಗಳ ಕುರಿತು ವರದಿ ಮಂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net