ಎ.2 ರಂದು ಉಡುಪಿಯಲ್ಲಿ ಜಯಪ್ರಕಾಶ್ ಹೆಗ್ಡೆ, 3ರಂದುಮಂಗಳೂರಿನಲ್ಲಿ ಪದ್ಮರಾಜ್ ಆರ್.ನಾಮಪತ್ರ ಸಲ್ಲಿಕೆ

co ca
Published on

ಮಂಗಳೂರು: ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳಾದ ಜಯಪ್ರಕಾಶ್ ಹೆಗ್ಡೆ ಅವರು ಏಪ್ರಿಲ್ 2 ರಂದು ಉಡುಪಿಯಲ್ಲಿ ಮತ್ತು 3 ರಂದು ಪದ್ಮರಾಜ್ ಆರ್. ಮಂಗಳೂರಿನಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಮಕ್ಷಮದಲ್ಲಿ ಮಂಗಳವಾರ ಕಾಂಗ್ರೆಸ್ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪದ್ಮರಾಜ್ ಆರ್. ಅವರ ಚುನಾವಣಾ ಕಚೇರಿ ಉದ್ಘಾಟನೆ ಮತ್ತು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಕಾರ್ಯ ಆರಂಭ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಈ ವಿಷಯ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ದಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಕೆ. ಅವರು, ಎಲ್ಲಾ ಬ್ಲಾಕ್‌ಗಳಲ್ಲಿ ಮಾ. 27ರಿಂದ 30ರವರೆಗೆ ಬ್ಲಾಕ್, ವಿಧಾನಸಭಾ ಕ್ಷೇತ್ರಗಳ ಸಭೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ದಿನದಂದು ಮಂಗಳೂರು ಪುರಭವದಲ್ಲಿ ಸಮಾವೇಶ ನಡೆದು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಾಗುವುದು. ಬಳಿಕ ಎ. 11ರಿಂದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಮೊದಲ ದಿನ ಸುಳ್ಯ, ಎ. 12ರಂದು ಮೂಡುಬಿದರೆ, ಎ.13ರಂದು ಪುತ್ತೂರು, 14ರಂದು ಮಂಗಳೂರು ದಕ್ಷಿಣ, 15ರಂದು ಉಳ್ಳಾಲ, 16ರಂದು ಮಂಗಳೂರು ಉತ್ತರ, 17ರಂದು ಬೆಳ್ತಂಗಡಿ, 18ರಂದು ಬಂಟ್ವಾಳದಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಮಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಕಾರ್ಯಕ್ರಮ ಈಗಾಗಲೇ ನಡೆದಿರುವುದರಿಂದ ಜಿಲ್ಲಾ ಮಟ್ಟದ ಇನ್ನೊಂದು ಕಾರ್ಯಕ್ರಮ ಪುತ್ತೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ದಿನಾಂಕ ಇನ್ನಷ್ಟೆ ನಿಗದಿಯಾಗಬೇಕಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪಕ್ಷದ ದ.ಕ. ಜಿಲ್ಲಾ ಉಸ್ತುವಾರಿ ರಮಾನಾಥ ರೈ, ಮಾಜಿ ಸಚಿವ ಅಭಯಚಂದ್ರ ಜೈನ್, ಅಭ್ಯರ್ಥಿ ಪದ್ಮರಾಜ್, ಮುಖಂಡರಾದ ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೋ, ಐವನ್ ಡಿಸೋಜಾ, ರಕ್ಷಿತ್ ಶಿವರಾಂ, ಶಾಹುಲ್ ಹಮೀದ್, ಇನಾಯತ್ ಅಲಿ, ಸದಾಶಿವ ಉಳ್ಳಾಲ್, ಯು.ಕೆ. ಮೋನು ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net