ಮಿತಿ ಮೀರುತ್ತಿದೆ ಡಿಕೆಶಿ, ಎಚ್ಡಿಕೆ ಟಾಕ್‌ಫೈಟ್: ಒಕ್ಕಲಿಗ ಸಮುದಾಯದಲ್ಲಿ ಅಸಮಾಧಾನ

DKS-HDK
Supporters of Karnataka Congress Senior Leader DK Shivakumar celebrate by bursting crackers and greet him for his appointment as Karnataka Congress president at his residence in Sadashivnagar, in Bengaluru on Wednesday 11th March 2020 Pics: www.pics4news.com
Published on

ಮಂಡ್ಯ: ಒಕ್ಕಲಿಗ ನಾಯಕರಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಟೀಕಾ ಪ್ರಹಾರ ಎಲ್ಲೆ ಮೀರುತ್ತಿದೆ. ದಿನದಿಂದ ದಿನಕ್ಕೆ ಇಬ್ಬರ ನಡುವಿನ ವಾಕ್ಸಮರ ತಾರಕಕ್ಕೇರುತ್ತಿರುವುದು ಸಮುದಾಯದ ಜನರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
ಅವಶ್ಯಕತೆಗಿಂತಲೂ ಹೆಚ್ಚಿನ ಆರೋಪ, ಪ್ರತ್ಯಾರೋಪ ಮಾಡುವುದರಲ್ಲಿಯೇ ಇಬ್ಬರು ನಾಯಕರು ಜೋತು ಬಿದ್ದಿದ್ದಾರೆ. ಡಿಕೆಶಿ, ಎಚ್ಡಿಕೆ ರಾಜಕೀಯದಲ್ಲಿ ಉನ್ನತ ಸ್ಥಾನಮಾನದಲ್ಲಿದ್ದಾರೆ. ಆದಾಗ್ಯೂ ಒಬ್ಬರ ಮೇಲೆ ಮತ್ತೊಬ್ಬರು ವೈಷಮ್ಯ ಕಾರುತ್ತಿದ್ದಾರೆ. ಪ್ರಸ್ತುತವಂತೂ ರಾಜ್ಯದಲ್ಲಿ ಇಬ್ಬರ ನಡುವಿನ ಜಗಳದ ವಿಷಯವೇ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಇದು ಒಕ್ಕಲಿಗ ಸಮುದಾಯದಲ್ಲಿ ಪಕ್ಷಾತೀತವಾಗಿ ಬೇಸರ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಕರೆಸಿ ಸಲಹೆ ನೀಡಬೇಕೆಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಸಮುದಾಯದ ಮುಖಂಡರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಸಮುದಾಯಕ್ಕೆ ಇರಿಸು ಮುರಿಸು: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಇಬ್ಬರು ಪರಸ್ಪರ ಟೀಕೆ ಮಾಡುತ್ತಿದ್ದರೂ ಮಿತಿ ಮೀರಿರಲಿಲ್ಲ. ಹಾಗೆ ನೋಡಿದರೆ 2018ರ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಎಚ್ಡಿಕೆ ಸಿಎಂ ಆಗುವುದರಲ್ಲಿ ಡಿಕೆಶಿ ಪ್ರಮುಖ ಪಾತ್ರ ವಹಿಸಿದ್ದರು. ಆ ಸಮಯದಲ್ಲಿ ಇಬ್ಬರನ್ನು ಜೋಡೆತ್ತುಗಳೆಂದೂ ಕರೆಯಲಾಗುತ್ತಿತ್ತು. ಆದರೆ ಆ ಬಾಂಧವ್ಯ ಹೆಚ್ಚು ದಿನ ಉಳಿದುಕೊಳ್ಳಲಿಲ್ಲ.
ಅದರಲ್ಲಿಯೂ 2023ರ ವಿಧಾನಸಭೆ ಚುನಾವಣೆ ಹೊಸ್ತಿಲಿನಿಂದ ಇಬ್ಬರ ನಡುವಿನ ಅಂತರ ಹೆಚ್ಚಾಗುತ್ತಲೇ ಹೋಯಿತು. ಮಾತ್ರವಲ್ಲದೆ ಇಂದಿಗೂ ಮುಂದುವರೆಯುತ್ತಲೇ ಇದೆ. ಇನ್ನು ಜಿಲ್ಲೆಯ ವಿಚಾರಕ್ಕೆ ಬರುವುದಾದರೆ 2018ರ ಚುನಾವಣೆಯಲ್ಲಿ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿಗೆ ಒಕ್ಕಲಿಗ ಸಮುದಾಯ ಆಸರೆಯಾಗಿ ನಿಂತಿತ್ತು. ಇದಕ್ಕೆ ಕಾರಣ ಎಚ್ಡಿಕೆ ಸಿಎಂ ಆಗುತ್ತಾರೆನ್ನುವುದಾಗಿತ್ತು. ಅದೇ ರೀತಿ 2023ರ ಚುನಾವಣೆಯಲ್ಲಿ ಸಮುದಾಯದ ಸಹಕಾರ ಕಾಂಗ್ರೆಸ್ ಪರವಾಗಿತ್ತು. ಕಾರಣ ಡಿಕೆಶಿ ನನಗೊಂದು ಅವಕಾಶ ಕೊಡಿ, ರಾಜಕೀಯದಲ್ಲಿ ಉತ್ತಮ ಸ್ಥಾನ ಅಲಂಕರಿಸುತ್ತೇನೆಂದು ಮಾಡಿದ ಮನವಿಗೆ ಸಮುದಾಯ ಬೆನ್ನಿಗೆ ನಿಂತಿತ್ತು. ಮಾತ್ರವಲ್ಲದೆ ಮೊದಲ ಹಂತದಲ್ಲಿ ಸಿಎಂ ಹುದ್ದೆ ತಪ್ಪಿದಾಗ ವಿರೋಧವೂ ವ್ಯಕ್ತಪಡಿಸಿದ್ದರು. ಇಬ್ಬರನ್ನು ಸಮುದಾಯದ ಜನರು ಬೆಂಬಲಿಸಲು ಕಾರಣ ಒಕ್ಕಲಿಗರು ರಾಜಕೀಯದಲ್ಲಿ ಉತ್ತಮ ಸ್ಥಾನ ಅಲಂಕರಿಸುತ್ತಿರೆನ್ನುವ ಪ್ರೀತಿಯೇ ಹೊರತು ಸ್ವಾರ್ಥವಾಗಿರಲಿಲ್ಲ. ಆದರೆ ಇಬ್ಬರು ನಾಯಕರಿಂದ ಹಳೇ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯಕ್ಕೆ ರಾಜಕೀಯ, ಶೈಕ್ಷಣಿಕ ಸೇರಿದಂತೆ ನಿರೀಕ್ಷೆ ಮಾಡಿದಂತೆ ಕೊಡುಗೆ ಸಿಕ್ಕಿಲ್ಲ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಈ ಎಲ್ಲವನ್ನೂ ಮೀರಿ ಬೆಂಬಲ ನೀಡುತ್ತಿದ್ದರೂ ಇಬ್ಬರ ನಡುವಿನ ಟಾಕ್‌ಫೈಟ್ ಸಮುದಾಯಕ್ಕೆ ಇರಿಸು ಮುರಿಸು ತರಿಸಿದೆ.

ಮಾದರಿಯಾಗಿದ್ದ ಹಿರಿಯ ನಾಯಕರು
ಪ್ರಸ್ತುತ ಸಂದರ್ಭವನ್ನು ನೋಡಿದಾಗ ಜಿಲ್ಲೆಯ ಒಕ್ಕಲಿಗ ಸಮುದಾಯದ ಹಿರಿಯ ರಾಜಕಾರಣಿಗಳು ನೆನಪಾಗುತ್ತಾರೆ. ನಿತ್ಯಸಚಿವ ಕೆ.ವಿ.ಶಂಕರಗೌಡ, ಮಾಜಿ ಸಂಸದ ಡಾ.ಜಿ.ಮಾದೇಗೌಡ, ಮಾಜಿ ಸಿಎಂ ಎಸ್.ಎಂ.ಕೃಷ್ಣ, ಮಾಜಿ ಸಚಿವ ಅಂಬರೀಷ್, ಎಸ್.ಡಿ.ಜಯರಾಂ ಸೇರಿದಂತೆ ಹಲವು ಘಟಾನುಘಟಿ ನಾಯಕರು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಖದರ್ ತೋರಿಸಿದ್ದರು. ಸಮುದಾಯದ ರಾಜಕಾರಣಿಗಳು ಎಂದರೆ ಸದನದಲ್ಲಿಯೂ ಹೆಚ್ಚಿನ ಗೌರವ ನೀಡಲಾಗುತ್ತಿತ್ತು. ಇದು ಸಮುದಾಯದ ಗರ್ವವನ್ನು ವೃದ್ಧಿಸಿತ್ತು. ರಾಜಕೀಯವಾಗಿ ಬೇರೆ ಪಕ್ಷದಲ್ಲಿದ್ದರೂ ಟೀಕೆಗಳು ಮಿತಿ ಮೀರುತ್ತಿರಲಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಒಗ್ಗಟ್ಟು ತೋರಿಸುತ್ತಿದ್ದರು. ಮಾತ್ರವಲ್ಲದೆ ಒಬ್ಬರ ಬಗ್ಗೆ ಮತ್ತೊಬ್ಬರು ಗೌರವವಿಟ್ಟುಕೊಂಡಿದ್ದರು. ಅದನ್ನು ಇಂದು ಸಮುದಾಯದ ಜನರು ಮೆಲುಕು ಹಾಕುತ್ತಿದ್ದಾರೆ.

ದಿಕ್ಕು ತಪ್ಪಿದ ಮೈಸೂರು ಚಲೋ
ಡಿ.ಕೆ.ಶಿವಕುಮಾರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ಮತ್ತೊಂದು ಹಂತಕ್ಕೆ ಹೋಗಲು ಮೈಸೂರು ಚಲೋ ಪಾದಯಾತ್ರೆ ಕಾರಣವಾಗಿದೆ. ಮೈಸೂರಿನ ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮದಲ್ಲಾದ ಅವ್ಯವಹಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿತ್ತು. ಒಟ್ಟಾರೆ ಇದರ ಉದ್ದೇಶ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆನ್ನುವ ಆಗ್ರಹವಾಗಿತ್ತು. ಅತ್ತ ಇದರ ವಿರುದ್ಧವಾಗಿ ಕಾಂಗ್ರೆಸ್ ಕೂಡ ಜನಾಂದೋಲನಾ ಸಮಾವೇಶ ಮಾಡಿತ್ತು. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಕೊಡದೇ ವಂಚಿಸಿದೆ ಎನ್ನುವುದು ಮುಖ್ಯ ವಿಷಯವಾಗಿತ್ತು.
ಆದರೆ ಪಾದಯಾತ್ರೆ ಹಾಗೂ ಜನಾಂದೋಲನದಲ್ಲಿ ನಡೆದಿದ್ದೆ ಬೇರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಚ್ಡಿಕೆ, ಡಿಕೆಶಿ ವಿರುದ್ಧ ಆರೋಪಗಳ ಸುರಿಮಳೆಗೈದರೆ, ಜನಾಂದೋಲನಾದಲ್ಲಿ ಡಿಕೆಶಿ, ಎಚ್ಡಿಕೆ ಬಗ್ಗೆ ವ್ಯಂಗ್ಯವಾಡಿದರು. ವೈಯಕ್ತಿಕ ವಿಷಯಗಳು ಬೀದಿಗೆ ಬಂದವು. ಇದರಿಂದಾಗಿ ಪ್ರಮುಖ ವಿಷಯಕ್ಕಿಂತ ಇಬ್ಬರು ನಾಯಕರ ನಡುವಿನ ಟೀಕೆಗಳೇ ಪ್ರಾಮುಖ್ಯತೆ ಪಡೆದುಕೊಂಡವು. ಈ ನಡುವೆ ಮತ್ತೊಂದು ಹೆಜ್ಜೆ ಮುಂದೆ ಹೋದ ಡಿಕೆಶಿ, ಬಿಜೆಪಿಯಲ್ಲಿರುವ ಒಕ್ಕಲಿಗ ನಾಯಕರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್‌ನಾರಾಯಣ, ಸಿ.ಪಿ.ಯೋಗೇಶ್ವರ್ ಬಗ್ಗೆಯೂ ಟೀಕಿಸಿದ್ದರು. ಇದೆಲ್ಲವೂ ಸಮುದಾಯಕ್ಕೆ ಬೇಸರ ತರಿಸಿದೆ. ಎಲ್ಲ ಪಕ್ಷದಲ್ಲಿಯೂ ಬೇರೆ ಸಮುದಾಯದ ನಾಯಕರಿದ್ದಾರೆ. ಅವರು ಕೂಡ ಒಬ್ಬರ ಬಗ್ಗೆ ಮತ್ತೊಬ್ಬರು ಟೀಕೆ ಮಾಡುತ್ತಾರೆ. ಆದರೆ ಅವಶ್ಯಕತೆಗಿಂತ ಹೆಚ್ಚಿರುವುದಿಲ್ಲ. ಆದ್ದರಿಂದ ಇನ್ನಾದರೂ ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂಬುದು ಸಮುದಾಯದ ಜನರ ಅಪೇಕ್ಷೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net