ಕನ್ನಡ ಮಾಧ್ಯಮ ಶಾಲೆಗಳಿಗೆ ಬೇಕು ಕಾಯಕಲ್ಪದ ಗ್ಯಾರಂಟಿ; ದಕ 26 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರಕ್ಕೆ ಅಧ್ಯಕ್ಷೆ ಭುವನೇಶ್ವರಿ ಹೆಗಡೆ ಸಲಹೆ

mng-mar23-sahithya2
ದಕ್ಷಿಣ ಕನ್ನಡ ಜಿಲ್ಲಾ 26ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭ ಮೊದಲು ಶನಿವಾರ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದ ಹೊರ ಆವರಣದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಉದ್ಘಾಟಿಸಿದರು. ಸಮ್ಮೇಳನ ಅಧ್ಯಕ್ಷೆ ಭುವನೇಶ್ವರಿ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮುಂತಾದವರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳು ಏಕೆ ಬರುತ್ತಿಲ್ಲ ಎಂದು ಸರ್ಕಾರ ಪರ್ಯಾಲೋಚಿಸಬೇಕು. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಕಾಯಕಲ್ಪ ಮಾಡುತ್ತೇವೆ ಎಂಬ ಒಂದು ಗ್ಯಾರಂಟಿಯನ್ನು ಸರ್ಕಾರದಿಂದ ನಿರೀಕ್ಷಿಸುತ್ತೇವೆ ಎಂದು ಹಿರಿಯ ಸಾಹಿತಿ, ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಹೇಳಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ಜರುಗಿದ ದಕ್ಷಿಣ ಕನ್ನಡ ಜಿಲ್ಲಾ 26ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಂಗ್ಲ ಮಾಧ್ಯಮದ 1 ರಿಂದ ನಾಲ್ಕನೇ ತರಗತಿಗಳು ಕನ್ನಡ ಮಾಧ್ಯಮವಾಗಿ ಪರಿವರ್ತನೆ ಹೊಂದಬೇಕು ಎನ್ನುವ ಸರ್ಕಾರಿ ಆದೇಶಕ್ಕೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ತಂದಿರುವ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ನೀಡಿರುವ ಮಾತೃಭಾಷಾ ಮಾಧ್ಯಮ ಪರವಾದ ತೀರ್ಪು ಆಧರಿಸಿ ಕೂಡಲೇ ತರವುಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
ಗ್ರಂಥಾಲಯ ಇಲಾಖೆಗೆ ಕಾಯಕಲ್ಪ ನೀಡಿ ಪುಸ್ತಕಗಳನ್ನು ಓದಿಗಾಗಿ ಜನರ ಬಳಿಗೆ ಕೊಂಡೊಯ್ಯುವ ಸಂಚಾರಿ ಗ್ರಂಥಾಲಯ ಯೋಜನೆ ಪುನರಾರಂಭವಾಗಬೇಕು. ಜಿಲ್ಲೆಯಾದ್ಯಂತ ಇರುವ ಖಾಸಗಿ ಗ್ರಂಥಾಲಯಗಳು ಊರೂರಲ್ಲಿ ನಾಗರಿಕ ಸಮಾಜದ ಸ್ವಾಸ್ಥೃ ರಕ್ಷಕರಾಗಿ ಕೆಲಸ ಮಾಡುವಂತಾಗಬೇಕು. ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ತಲುಪುವಂತೆ ಪುಸ್ತಕ ಮಾರಾಟ ಇಲಾಖೆ ಆರಂಭಿಸಬೇಕು ಎಂದು ಅವರು ಸಮ್ಮೇಳನದ ವೇದಿಕೆಯಿಂದ ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.
ದಕ್ಷಿಣ ಕನ್ನಡ ಜಿಲ್ಲೆಯವರು ಶುದ್ಧ ಕನ್ನಡ ಮಾತನಾಡುತ್ತಾರೆಂಬ ಮೆಚ್ಚುಗೆ ಇದೆ. ಹಾಗಿದ್ದರೂ, ಇಂದಿನ ಗೂಗಲ್ ಆಡಳಿತದಲ್ಲಿ ಭಾಷಾಪಭ್ರಂಶ ಎಗ್ಗಿಲ್ಲದೆ ಮೆರೆಯುತ್ತಿದ್ದು, ಭಾಷಾ ಶುದ್ಧತೆಗೆ ಆದ್ಯತೆ ನೀಡುವ, ಶುದ್ಧ ಭಾಷೆಯನ್ನು ಕಲಿಸುವ ಅನಿವಾರ್ಯತೆ ಹಿಂದೆಂಗಿಂತಲೂ ಹೆಚ್ಚಾಗಿದೆ ಎಂದು ವರು ಅಭಿಪ್ರಾಯಪಟ್ಟರು.
ಕನ್ನಡ ಶಾಲೆಗಳಿಗೆ ಮಕ್ಕಳಿಲ್ಲ ಎಂಬ ಕೂಗಿದೆ. ಇದಕ್ಕೆ ಪೂರಕವಾಗಿ ಕಳೆದ ಸಾಲಿನಲ್ಲಿ ದಕ್ಷಿಣ ಕನ್ನಡದ 55 ಶಾಲೆಗಳಲ್ಲಿ 1 ನೇ ತರಗತಿಗೆ ಶೂನ್ಯ ದಾಖಲಾತಿಯಾಗಿದೆ. ಆದರೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2024- 25 ನೇ ಅವಧಿಯ 150 ಸೀಟುಗಳ ಪ್ರವೇಶಕ್ಕೆ 19 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲೆಯ ಪರಂಪರೆ ಉಳಿಸಿಕೊಂಡು ಭಿನ್ನಾಭಿಪ್ರಾಯಗಳ ನಡುವೆಯೂ ಸೌಹಾರ್ದವಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕಿದೆ ಎಂದು ಅವರು ಆಶಿಸಿದರು.
ಸಮ್ಮೇಳನನ ಉದ್ಘಾಟನೆಗೆ ಮುನ್ನ ಪುರಭವನದ ಹೊರ ಆವರಣದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ರಾಷ್ಟ್ರ ಧ್ವಜಾರೋಹಣನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ನೆರವೇರಿಸಿದರು. ಡಿಸಿಪಿ ಸಿದ್ದಾರ್ಥ್ ಕನ್ನಡ ಧ್ವಜಾರೋಹಣಗೈದರು. ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ನೆರವೇರಿಸಿದರು.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಂಗಳೂರು ವಿವಿ ಕಾಲೇಜು ಮುಂಭಾಗದಿಂದ ಸಮ್ಮೇಳನ ವೇದಿಕೆ ತನಕ ಆಯೋಜಿಸಿದ್ದ ಕನ್ನಡ ಭುವನೇಶ್ವರಿ ಮೆರವಣಿಗೆ ರದ್ದುಪಡಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ‘ಸಾಹಿತ್ಯ ಸಿರಿ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಡಾ.ಮುರಳಿ ಮೋಹನ ಚೂಂತಾರು, ಡಾ.ಮಾಧವ ಎಂ.ಕೆ, ಮಂಜುನಾಥ ಎಸ್. ರೇವಣ್‌ಕರ್ ಮೊದಲಾದವರು ಉಪಸ್ಥಿತರಿದ್ದರು.
ಡಾ. ಮಾಧವ ಎಂ. ಮತ್ತು ಮಮತಾ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿನಯ ಆಚಾರ್ಯ ವಂದಿಸಿದರು.

..............
ವಿವಿಧತೆಯಲ್ಲಿ ಏಕತೆ

ಕನ್ನಡ, ಜತೆಗೆ ಕೊಂಕಣಿ, ತುಳು ಸಹಿತ ಬಹುಭಾಷೆಯ, ಬಹು ಸಂಸ್ಕೃತಿಯ ಜನರನ್ನು ಒಳಗೊಂಡಿರುವ ದಕ್ಷಿಣ ಕನ್ನಡ ನಿಜ ಅರ್ಥದಲ್ಲಿ ವಿವಿಧತೆಯಲ್ಲಿ ಏಕತೆ ಹೊಂದಿದೆ. ಭೂತಕೋಲ- ನಾಗಮಂಡಲವನ್ನು ಶ್ರದ್ಧೆಯಿಂದ ನಂಬುವ ಈ ನಾಡಿನಲ್ಲಿ ಕಂಬಳ ಇಲ್ಲದ ಸ್ಥಳವೇ ಇಲ್ಲ ಎಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಹೇಳಿದರು.
 ಕಾಸರಗೋಡು ಕರ್ನಾಟಕದ ಅಭಿಭಾಜ್ಯ ಅಂಗ. ಈ ಮಾತನ್ನು ಸದಾ ತಮ್ಮ ಕ್ರಿಯೆ, ಮಾತುಗಳಲ್ಲಿ ವ್ಯಕ್ತಪಡಿಸುತ್ತಿದ್ದ ಕಯ್ಯರ ಕಿಂಞಣ್ಣ ರೈ, ಗೋವಿಂದ ಪೈ ಅವರ ಕನಸು ನನಸಾಗಿಲ್ಲದ ಬೇಸರ ಇಂದಿಗೂ ಇದೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net