

ಪರಶುರಾಮಪುರ: ಆಧುನಿಕ ಕಾಲಘಟ್ಟದಲ್ಲಿ ದಾರ್ಶನಿಕರ ಜಯಂತ್ಯುತ್ಸವ ಆಶಯ ಕಳೆದುಕೊಳ್ಳುತ್ತಿದ್ದು, ಡಿಜೆ, ಅಸಭ್ಯ ನೃತ್ಯ, ಸಿಡಿಮದ್ದು ಶಬ್ದ ಇವೆಲ್ಲವೂ ಆಚರಣೆಯ ಭಾಗವಾಗುತ್ತಿರುವುದು ವಿಷಾದನೀಯ ಎಂದು ಸಂಸ್ಕೃತಿ ಚಿಂತಕ ಈಶ್ವರಪ್ಪ ಹೇಳಿದರು.
ಶ್ರೀಕೃಷ್ಣ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಚನ್ನಮ್ಮನಾಗತಿಹಳ್ಳಿ ಶ್ರೀಕೃಷ್ಣ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಹಾಕಾವ್ಯಗಳಲ್ಲಿನ ಆದರ್ಶಗಳು ಮತ್ತು ಶ್ರೀಕೃಷ್ಣನ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಕೃಷ್ಣ ಸೇರಿ ದಾರ್ಶನಿಕರು, ಸಂತರು, ಮಹನೀಯರಿಗೆ ಜಾತಿ ಪಟ್ಟ ಕಟ್ಟುವುದು ಸರಿಯಲ್ಲ. ಜಯಂತ್ಯುತ್ಸವಗಳನ್ನು ಒಂದೇ ಸಮುದಾಯದ ಜನ ಸೇರಿ ಆಚರಿಸುವುದು ಸರಿಯಲ್ಲ. ಜಯಂತಿಗಳನ್ನು ಅರ್ಥಪೂರ್ಣಗೊಳಿಸಲು ಸರ್ವ ಜಾತಿ, ಧರ್ಮದವರು ಒಗ್ಗೂಡಬೇಕು. ಜತೆಗೆ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಆಯೋಜಿಸಬೇಕು ಎಂದರು.
ಮುಖ್ಯಶಿಕ್ಷಕ ಜಿ.ಡಿ.ವೀರಭದ್ರಯ್ಯ ಮಾತನಾಡಿ, ನಮ್ಮ ಹಿರಿಯರು ದೇವರ ಆರಾಧನೆ, ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಬುದ್ಧತೆ ಮೆರೆಯುತ್ತಿದ್ದರು. ಆದರೆ, ಈಚೆಗೆ ಯುವ ಪೀಳಿಗೆ ದಾರಿ ತಪ್ಪುತ್ತಿದೆ. ದೇವರ ಆರಾಧನೆಯಲ್ಲೂ ಪಾಶ್ಚಿಮಾತ್ಯ ಸಂಸ್ಕೃತಿ ಅಬ್ಬರಿಸುತ್ತಿದೆ ಎಂದು ಬೇಸರಿಸಿದರು.
ಮುಖಂಡರಾದ ಚಿತ್ರಲಿಂಗಪ್ಪ, ರುದ್ರಮುನಿಯಪ್ಪ, ಕಾಡಪ್ಪ, ದಾಸಪ್ಪ, ಕೊಳಾಳು ಮಹೇಶ್ವರಪ್ಪ, ಶಿಕ್ಷಕರಾದ ಸಂತೋಷಕುಮಾರ, ಲೋಕೇಶ, ಎನ್.ರತ್ನಾ ಇದ್ದರು.