

ಹುಬ್ಬಳ್ಳಿ : ದೀಪಗಳ ಹಬ್ಬ ದೀಪಾವಳಿ ಸಡಗರದಿಂದಾಗಿ ಹುಬ್ಬಳ್ಳಿಯ ಮಾರುಕಟ್ಟೆ ಜನರಿಂದ ತುಂಬಿದೆ. ಎಲ್ಲಿ ನೋಡಿದರಲ್ಲಿ ಖರೀದಿ ಭರಾಟೆಯೇ ಕಾಣಿಸುತ್ತಿದೆ.
ಕಳೆದ ಕೆಲ ದಿನಗಳಿಂದ ಮಾರುಕಟ್ಟೆಗಳಲ್ಲಿ ಕಾಲಿಡಲಾರದಷ್ಟು ಜನದಟ್ಟಣೆ ಉಂಟಾಗಿದೆ. ಬಟ್ಟೆ ಅಂಗಡಿಗಳ ಎದುರು ಜನಸಂದಣಿ ಸಾಮಾನ್ಯವಾಗಿದೆ. ದೀಪಾವಳಿಗೆ ಹೊಸ ಬಟ್ಟೆ ಖರೀದಿ ಪ್ರತಿ ವರ್ಷದ ಸಾಮಾನ್ಯ ಸಂಗತಿ. ಸೀರೆ, ರೆಡಿಮೇಡ್ ಚೂಟಿ, ಪ್ಯಾಂಟ್, ಶರ್ಟ್, ಮಕ್ಕಳ ಬಟ್ಟೆಗಳ ಖರೀದಿಗಾಗಿ ಜನರು ಕುಟುಂಬ ಸಮೇತರಾಗಿ ಬಟ್ಟೆ ಅಂಗಡಿಗಳಿಗೆ ಹೋಗುತ್ತಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಇಲೆಕ್ಟ್ರಿಕಲ್ ವಸ್ತುಗಳ ಖರೀದಿಯೂ ಜೋರಾಗಿದೆ. ಹೊಸ ಟಿವಿ, ರೆಫ್ರಿಜಿರೇಟರ್, ಬೈಕ್, ಕಾರುಗಳ ಖರೀದಿಯೂ ಹೆಚ್ಚಿದೆ. ವಾಹನಗಳ ಹಲವಾರು ಕಂಪನಿಗಳು ಹಬ್ಬಕ್ಕಾಗಿ ವಿಶೇಷ ರಿಯಾಯಿತಿ ಘೋಷಿಸಿದ್ದು, ಖರೀದಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ.
ವಾಹನಗಳ ಶೋ ರೂಮ್ಳು, ಬಟ್ಟೆ ಅಂಗಡಿಗಳು, ಇಲೆಕ್ಟ್ರಿಕ್ ವಸ್ತುಗಳ ಅಂಗಡಿಗಳು ನಿಗದಿತ ಮೊತ್ತದ ಖರೀದಿಯೊಂದಿಗೆ ಆಕರ್ಷಕ ಕೊಡುಗೆಗಳನ್ನೂ ನೀಡುತ್ತಿವೆ.
ಹುಬ್ಬಳ್ಳಿಯ ದುರ್ಗದಬೈಲ್, ಜನತಾ ಬಜಾರ, ಕೊಪ್ಪಿಕರ ರಸ್ತೆ, ದಾಜಿಬಾನಪೇಟೆ, ಶಹಾ ಬಜಾರ, ಗೋಕುಲ ರಸ್ತೆಯ ಮಾಲ್ಗಳು ಗ್ರಾಹಕರಿಂದ ತುಂಬಿವೆ. ಬಹುತೇಕ ಮಾಲ್ಗಳಲ್ಲಿ ಬಟ್ಟೆಗಳ ಮೇಲೆಯೂ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಒಂದು ಬಟ್ಟೆ ಖರೀದಿಸಿದರೆ ಮತ್ತೊಂದು ಅಥವಾ ಎರಡು ಬಟ್ಟೆಗಳು ಉಚಿತ ಎಂಬ ಆಫರ್ ಗ್ರಾಹಕರನ್ನು ಆಕರ್ಷಿಸುತ್ತಿದೆ.
ಚಿನ್ನದ ದರ ಗಗನಕ್ಕೆ ಏರಿದ್ದರು ಸಹ ಚಿನ್ನಾಭರಣ ಮಳಿಗೆಗಳು ಜನರಿಂದ ತುಂಬಿ ಹೋಗಿವೆ. ಕುಟುಂಬ ಸಮೇತರಾಗಿ ಜನರು ಚಿನ್ನಾಭರಣ ಖರೀದಿಸುತ್ತಿದ್ದಾರೆ. ಬೆಳ್ಳಿ ಹಾಗೂ ವಜ್ರದ ಆಭರಣಗಳ ಖರೀದಿಯೂ ಜೋರಾಗಿದೆ. ಇದರಿಂದ ಹಬ್ಬದ ಸಂಭ್ರಮ ಇಮ್ಮಡಿಗೊಂಡಂತಾಗಿದೆ.
ಇದೆಲ್ಲದರ ಮಧ್ಯೆ ದೀಪಾವಳಿಗೆ ಬೇಕಾದ ಆಕಾಶಬುಟ್ಟಿ, ಮಣ್ಣಿನ ಹಣತೆ ಮಾರಾಟ ಹೆಚ್ಚು ನಡೆಯುತ್ತಿದೆ. ಪ್ರಮುಖ ರಸ್ತೆಗಳ ಬದಿಯಲ್ಲಿ ಮಣ್ಣಿನ ಹಣತೆಗಳ ಮಾರಾಟ ಕಾಣಿಸುತ್ತಿದೆ. 5, 10 ಹಣತೆಗಳನ್ನು ಖರೀದಿಸುತ್ತಿದ್ದರೆ, ಕೆಲವರು ಎರಡ್ಮೂರು ಡಜನ್ಗಟ್ಟಲೇ ಖರೀದಿ ಮಾಡುತ್ತಿರುವುದು ಕಂಡುಬಂದಿತು.
ಇನ್ನೂ, ಬಗೆಬಗೆಯ ಅಂದ ಇರುವ ಆಕಾಶಬುಟ್ಟೆಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ದುರ್ಗದಬೈಲ್, ಜನತಾ ಬಜಾರ, ಗೋಕುಲ ರಸ್ತೆ ಹಾಗೂ ಇನ್ನಿತರ ಪ್ರಮುಖ ಪ್ರದೇಶಗಳಲ್ಲಿ ಆಕಾಶ ಬುಟ್ಟಿಗಳ ಮಾರಾಟ ನಡೆಯುತ್ತಿದೆ. 200 ರೂ.ಗಳಿಂದ 2 ಸಾವಿರಕ್ಕೂ ಹೆಚ್ಚು ಮೌಲ್ಯದ ಆಕಾಶ ಬುಟ್ಟಿಗಳನ್ನು ಮಾರಾಟ ಮಾಡಲಾಗುತ್ತಿದೆ. ಗೋಲಾಕಾರ, ನಕ್ಷತ್ರ ಆಕಾರ, ಪಿರಾಮಿಡ್ ಸೇರಿದಂತೆ ವಿವಿಧ ನಮೂನೆಯ ಆಕಾಶಬುಟ್ಟಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಬಗೆಬಗೆಯ ವಿದ್ಯುತ್ ದೀಪಗಳನ್ನೂ ಜನರು ಖರೀದಿಸುತ್ತಿದ್ದಾರೆ. ಹೂವು, ಹಣ್ಣುಗಳ ಮಾರಾಟ ಎಲ್ಲ ಪ್ರಮುಖ ರಸ್ತೆ, ವೃತ್ತಗಳಲ್ಲಿ ಜೋರಾಗಿ ನಡೆಯುತ್ತಿದೆ.