

ಆರ್.ತುಳಸಿಕುಮಾರ್
ಬೆಂಗಳೂರು: ಮಹಾನಗರದಲ್ಲಿ ಇ-ಖಾತಾ ಸಿಗದ ಕಾರಣ ಸಾರ್ವಜನಿಕರು ಆಸ್ತಿ ಖರೀದಿಸಲು ಹಿಂದೇಟು ಹಾಕುತ್ತಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಈ ಬಾರಿಯ ದೀಪಾವಳಿ ಆದಾಯದ ಬೆಳಕಿನ ಬದಲು ಕತ್ತಲೆಯ ಭಾಗ್ಯ ಕರುಣಿಸಿದಂತಿದೆ.
ನೋಂದಣಿ ಪ್ರಕ್ರಿಯೆಗೆ ಇ-ಆಸ್ತಿ ಪ್ರಮಾಣಪತ್ರ ಕಡ್ಡಾಯ ಮಾಡಿರುವುದರಿಂದ ಹೊಸದಾಗಿ ಸ್ವತ್ತು ಖರೀದಿ, ಮಾರಾಟ ಸಾಧ್ಯವಾಗುತ್ತಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಇ-ಖಾತಾ ಇಲ್ಲದೆ ಯಾವ ನೋಂದಣಿಯನ್ನು ಮಾಡದ ಕಾರಣ ಹೊಸ ಸೈಟ್, ಫ್ಲ್ಯಾಟ್‌ಗಳು ಮಾರಾಟವಾಗುತ್ತಿಲ್ಲ. ಇದರ ನೇರ ಹೊಡೆತ ರಿಯಾಲ್ಟಿ ಮೇಲಾಗಿದ್ದು, ಈ ಕ್ಷೇತ್ರವು ತಿಂಗಳಿಂದೀಚಿಗೆ ಅಕ್ಷರಶ: ನೆಲಕಚ್ಚಿದೆ. ವಿಜಯದಶಮಿ ಹಾಗೂ ದೀಪಾವಳಿಗೆ ವಿಶೇಷ ಕೊಡುಗೆ ಹಾಗೂ ರಿಯಾಯಿತಿ ಘೋಷಿಸಿದ್ದರೂ, ಖರೀದಿದಾರರಿಲ್ಲದೆ ಮಂಕಾಗಿದೆ.
ಪ್ರತೀ ವರ್ಷದ ಒಟ್ಟು ವಹಿವಾಟಿನಲ್ಲಿ ಶೇ.30 ಭಾಗವು ದಸರಾ-ದೀಪಾವಳಿ ಅವಧಿಯಲ್ಲೇ ನಡೆಯುತ್ತದೆ. ಈ ಅವಧಿಯು ರಿಯಾಲ್ಟಿಯ ಆದಾಯ ಪ್ರಮಾಣವೂ ಹೆಚ್ಚಿರುತ್ತದೆ. ಇ-ಖಾತಾ ಸಮಸ್ಯೆಯಿಂದಾಗಿ ಖರೀದಿದಾರರಿಲ್ಲದೆ ರಿಯಲ್ ಎಸ್ಟೇಟ್ ಉದ್ಯಮ ನಷ್ಟಕ್ಕೆ ಒಳಗಾಗಿದೆ. ಉದ್ಯಮಿಗಳು ಆದಾಯವಿಲ್ಲದೆ ಸೊರಗಿದ್ದರೆ, ಮುದ್ರಾಂಕ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದ ಕೋಟ್ಯಂತರ ರೂ. ರೆವಿನ್ಯೂ ಕೈತಪ್ಪಿದೆ. ಜತೆಗೆ ಹಬ್ಬದ ಹಂಗಾಮಿನಲ್ಲಿ ನಗದು ಹರಿವು (ಕ್ಯಾಶ್ ಫ್ಲೋ) ಇಲ್ಲದೆ ಉದ್ಯಮವು ಕೆಲಸ ಸ್ಥಗಿತಗೊಳಿಸುವ ಹಂತ ತಲುಪಿದೆ.
ರಿಯಾಲ್ಟಿ ಸರಪಳಿಗೆ ಹೊಡೆತ:
ರಾಜ್ಯದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬೆಂಗಳೂರು ಶೇ.80 ಪಾಲು ಹೊಂದಿದೆ. ಈ ಅಗಾಧ ವಹಿವಾಟಿನಿಂದ ಉದ್ಯಮಕ್ಕೆ ಕೋಟ್ಯಂತರ ರೂ. ಆದಾಯವಿದೆ. ಜತೆಗೆ ರಿಯಾಲ್ಟಿಗೆ ಪೂರಕವಾಗಿ ಪ್ಲಂಬಿಂಗ್, ವೆಲ್ಡಿಂಗ್, ಪೇಯಿಂಟಿಂಗ್, ವಿದ್ಯುತ್ ಉಪಕರಣ, ಒಳಗಾಂಗಣ ವಿನ್ಯಾಸ ಸೇರಿ 278 ಬಗೆಯ ಉದ್ಯೋಗಗಳು ಅವಲಂಬಿತವಾಗಿವೆ. ಆಸ್ತಿ ನೋಂದಣಿಯಿಂದಾಗಿ ಈ ಸರಪಳಿ ಕೊಂಡಿಯಲ್ಲಿ ವ್ಯತ್ಯಯ ಉಂಟಾಗಿದೆ. ಪರಿಣಾಮ ನಿರ್ಮಾಣ ಕ್ಷೇತ್ರದ ಕಾಮಗಾರಿ ನಿಧಾನಗೊಳ್ಳುತ್ತಿದೆ. ಇದೇ ಪರಿಸ್ಥಿತಿ ತಿಂಗಳ ಕಾಲ ಮುಂದುವರಿದಲ್ಲಿ ಬಿಲ್ ಪಾವತಿ ಸಾಧ್ಯವಾಗದೆ ಕಚ್ಛಾವಸ್ತುಗಳ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಬ್ಯಾಂಕ್ ಸಾಲ ನೀಡಿಕೆಯೂ ಕುಂಠಿತವಾಗಬಹುದು ಎಂದು ಉದ್ಯಮದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕರಿಗೆ ಉದ್ಯೋಗ ನಷ್ಟದ ಭೀತಿ?:
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಲಕ್ಷಾಂತರ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಇಷ್ಟೇ ಸಂಖ್ಯೆಯ ಇನ್ನಿತರ ಉಪ ಉದ್ಯಮಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನೋಂದಣಿ ಸಮಸ್ಯೆ ವರ್ಷಾಂತ್ಯದವರೆಗೂ ಮುಂದವರಿದಿದ್ದೇ ಆದಲ್ಲಿ ವಿವಿಧ ಕಾಮಗಾರಿಗಳು ಸ್ಥಗಿತಗೊಳ್ಳಲಿವೆ. ಇದರಿಂದಾಗಿ ಉದ್ಯಮದಲ್ಲಿರುವ ಹೆಚ್ಚಿನ ಮಂದಿಗೆ ಕೆಲಸ ಇಲ್ಲದೆ ಸಂಬಳ ನೀಡಲು ಸಾಧ್ಯವಾಗದು. ಇದರಿಂದ ಉದ್ಯೋಗ ಕಡಿತಗೊಂಡು ಕಾರ್ಮಿಕರು ಕೆಲಸ ಇಲ್ಲದೆ ಅಲೆದಾದಬೇಕಾಗುತ್ತದೆ ಎಂದು ರಿಯಾಲ್ಟಿ ಉದ್ಯಮಿಯೊಬ್ಬರು ಎಚ್ಚರಿಕೆ ನೀಡಿರುವುದು ಸಮಸ್ಯೆಯ ಗಂಭೀರತೆಗೆ ಕನ್ನಡಿ ಹಿಡಿದಿದೆ.
ಮುದ್ರಾಂಕ ಶುಲ್ಕ, ಜಿಎಸ್‌ಟಿಗೂ ಬರೆ:
ರಾಜಧಾನಿಯಲ್ಲಿ ಮುದ್ರಾಂಕ ಇಲಾಖೆಯ 5 ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 43 ಸಬ್ ರಿಜಿಸ್ಟ್ರಾರ್ ಕಚೇರಿಗಳು ಇವೆ. ಇವುಗಳಲ್ಲಿ ನಿತ್ಯ ಸರಾಸರಿ ನೋಂದಣಿಯಿಂದ 100-120 ಕೋಟಿ ರೂ. ಆದಾಯ ಇದೆ. ಕಳೆದ ಅ.30ರಿಂದೀಚಿಗೆ ನೋಂದಣಿ ಪ್ರಕ್ರಿಯೆ ಹಳಿ ತಪ್ಪಿದ್ದು, ಶೇ. 20ಕ್ಕಿಂತ ಕಡಿಮೆ ನೋಂದಣಿಯಾಗುತ್ತಿದೆ. ಇದರಿಂದಾಗಿ ರಾಜಧಾನಿ ಒಂದರಲ್ಲೇ ಇಲಾಖೆಗೆ ಮಾಸಿಕ 2,000 ಕೋಟಿ ರೂ. ಆದಾಯ ಖೋತಾ ಆಗಿದೆ. ಇನ್ನೊಂದೆಡೆ ಜಿಎಸ್‌ಟಿ ಆದಾಯಕ್ಕೂ ಸಂಚಕಾರ ತಂದೊಡ್ಡಿದೆ. ಇದರ ಅರಿವಿದ್ದರೂ, ಸರ್ಕಾರ ಇ-ಖಾತಾ ಸಮಸ್ಯೆಗೆ ಯುದ್ಧೋಪಾದಿಯಲ್ಲಿ ಪರಿಹಾರ ಕಲ್ಪಿಸದಿರುವುದು ಅಚ್ಚರಿ ಮೂಡಿಸಿದೆ
ಆಸ್ತಿಗಳಿಗೆ ಇ-ಖಾತಾ ಅನ್ವಯಿಸಿರುವುದು ಸರಿಯಿದ್ದರೂ, ಇದನ್ನು ವ್ಯವಸ್ಥಿತವಾಗಿ ಜಾರಿಗೆ ತರುವ ಬದಲು ಏಕಾಏಕಿ ಅನುಷ್ಠಾನಕ್ಕೆ ತಂದಿರುವುರಿಂದ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ಆಸ್ತಿ ನೋಂದಣಿ ಬಹುತೇಕ ಸ್ಥಗಿತಗೊಂಡಿದೆ. ಮಾರಾಟಗಾರರು, ಖರೀದಿದಾರರಿಗೆ ಸಮಸ್ಯೆಯಾಗಿದ್ದು, ಸರ್ಕಾರ ಶೀಘ್ರವೇ ಪರಿಹಾರ ಹುಡುಕಿ ರಿಯಾಲ್ಟಿಗೆ ಬಲ ತುಂಬಲಿ.
- ಭಾಸ್ಕರ್ ಟಿ ನಂಜಪ್ಪ, ಕ್ರೆಡೈ ಬೆಂಗಳೂರು ವಿಭಾಗದ ಮಾಜಿ ಅಧ್ಯಕ್ಷ
ಆಸ್ತಿ ನೋಂದಣಿ ಹಳಿ ತಪ್ಪಿರುವ ಕಾರಣ ಬಿಲ್ಡರ್‌ಗಳು ನಮಗೆ ಕಚ್ಛಾವಸ್ತು ಪೂರೈಕೆಯನ್ನು ನಿಧಾನಗೊಳಿಸಲು ಸೂಚನೆ ನೀಡಿದ್ದಾರೆ. ಇದು ನಮ್ಮ ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ದೀಪಾವಳಿ ಹಬ್ಬಕ್ಕೆ ಅವರೆಲ್ಲರೂ ರಜೆ ಹೋಗಿದ್ದು, ವಾಪಸ್ ಬಂದ ಬಳಿಕ ಉದ್ಯೋಗ ಇಲ್ಲದಿದ್ದರೆ ಅನ್ಯ ಕಡೆ ತೆರಳುತ್ತಾರೆ. ಇದರಿಂದ ನಮ್ಮ ಸಣ್ಣ ಉದ್ಯಮಕ್ಕೆ ಹೊಡೆತ ಬಿದ್ದು, ನಷ್ಟಕ್ಕೆ ಒಳಗಾಗಬೇಕಾಗುತ್ತದೆ ಅಷ್ಟೆ.
- ನಾರಾಯಣಸ್ವಾಮಿ, ಕಚ್ಛಾವಸ್ತು ಪೂರೈಕೆದಾರ