

ವಿಜಯವಾಣಿ ಸುದ್ದಿಜಾಲ ಧಾರವಾಡ
ದೀಪಾವಳಿ ಹಬ್ಬದ ಅಂಗವಾಗಿ ನಗರದ ಮಾರುಕಟ್ಟೆಗಳು ಭಾನುವಾರ ಜನರಿಂದ ಭರ್ತಿಯಾಗಿದ್ದವು. ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಗಾಗಿ ಜನ ಸುಭಾಸ ರಸ್ತೆಯ ಮಾರುಕಟ್ಟೆಗೆ ಮುಗಿಬಿದ್ದಿದ್ದರು.
ಸೋಮವಾರ ನರಕ ಚತುರ್ದಶಿ, ಮಂಗಳವಾರ ಅಮಾವಾಸ್ಯೆ, ಬುಧವಾರ ಪಾಢ್ಯ ಇದೆ. ಹಬ್ಬಕ್ಕೆ ಅಗತ್ಯವಾದ ಹೂವು- ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಜನ ಭಾನುವಾರವೇ ಖರೀದಿಸಿದರು. ಹಬ್ಬಕ್ಕೆ ಪ್ರಮುಖವಾಗಿ ಫಲಪುಷ್ಪ ಬೇಕು. ಅವುಗಳಿಗೆ ಹೆಚ್ಚಿನ ಬೇಡಿಕೆ ಇದ್ದುದರಿಂದ ದರ ಕೊಂಚ ಏರಿಕೆಯಾಗಿತ್ತು. ಸೇಬು, ಸೀತಾಫಲ, ಚಿಕ್ಕು, ಪೇರಲ, ದಾಳಿಂಬೆ, ಬಾಳೆಹಣ್ಣು, ಮೊಸಂಬಿ ಹಣ್ಣುಗಳ ಖರೀದಿ ಜೋರಾಗಿತ್ತು.
ಇನ್ನು ಹಬ್ಬದ ಹಿನ್ನೆಲೆಯಲ್ಲಿ ಥರಹೇವಾರಿ ಹೂವು, ಮಾಲೆಗಳ ಖರೀದಿ ಕಂಡುಬ0ತು. ವಿಶೇಷವಾಗಿ ಚೆಂಡು ಹೂವು, ಸೇವಂತಿ, ಗುಲಾಬಿ ಹೂವುಗಳು ಮತ್ತು ಮಾಲೆಗಳನ್ನು ಜನ ಖರೀದಿಸಿದರು. ಮನೆ, ದೇವಸ್ಥಾನ, ವಾಹನಗಳಿಗೆ ಅಗತ್ಯ ಮಾಲೆಗಳಿಗೂ ಭಾರಿ ಬೇಡಿಕೆ ಇತ್ತು. ಹೂವು- ಹಣ್ಣು, ಪೂಜಾ ಸಾಮಗ್ರಿಗಳ ವ್ಯಾಪಾರಸ್ಥರು ಖುಷಿಯಾಗಿದ್ದರು. ರೈತರು ತಮ್ಮ ಹೊಲದಲ್ಲಿ ಬೆಳೆದ ಜೋಳದ ದಂಟು, ಕಬ್ಬು, ಬಾಳೆ ದಿಂಡುಗಳನ್ನು ಮಾರುಕಟ್ಟೆಗೆ ತಂದಿದ್ದಾರೆ. ಶಿವಾಜಿ ವೃತ್ತ, ಕಾಲೇಜು ರಸ್ತೆಗುಂಟ ಇಡಲಾಗಿದ್ದು, ಇನ್ನು 3 ದಿನ ಖರೀದಿ ನಡೆಯಲಿದೆ.