ಹುಬ್ಬಳ್ಳಿಯಲ್ಲಿ ವಸ್ತು ಪ್ರದರ್ಶನ ಮಾರಾಟ ಮೇಳ

IMG-20251009-WA0011-1.jpg
Published on

ಹುಬ್ಬಳ್ಳಿ: ಇಲ್ಲಿಯ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ನಗರದ ಗೋಕುಲ ರಸ್ತೆ ಹೆಬಸೂರ ಭವನದಲ್ಲಿ ದೀಪಾವಳಿ ಪ್ರಯುಕ್ತ ಉಡಾನ್ ಸೀಸನ್ 4, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಅ. 11ರಿಂದ ಎರಡು ದಿನಗಳ ವರೆಗೆ ಏರ್ಪಡಿಸಲಾಗಿದೆ ಎಂದು ಕ್ಲಬ್ ಪ್ರೊಜೆಕ್ಟ್ ಕಮಿಟಿ ಚೇರ್ಮನ್ ಪ್ರೊ. ವಿಜಯಲಕ್ಷ್ಮಿ ಕಟ್ಟಿಮಠ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಅವರು ಉತ್ಪಾದಿಸಿದ ಗೃಹ ಅಲಂಕಾರ, ಎಂಬ್ರಾಯ್ಡರಿ ಸೀರೆ, ಸಿದ್ಧ ಉಡುಪು, ಕರಕುಶಲ ಸಾಮಗ್ರಿ, ಹಬ್ಬದ ವಿಶೇಷ ತಿನಿಸುಗಳು, ಚಾಕಲೇಟ್, ಕೇಕ್, ಚಟ್ನಿ ಪುಡಿಗಳು, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಸೌಂದರ್ಯ ವರ್ಧಕಗಳು ಸೇರಿ ಇತರ ಸರಕುಗಳನ್ನು ಪ್ರದರ್ಶನಕ್ಕೆ ಇಡಲು ಅವಕಾಶ ನೀಡಲಾಗುತ್ತಿದೆ ಎಂದರು.

ಒಂದೇ ಸೂರಿನಡಿ ಹಬ್ಬದ ಎಲ್ಲ ವಸ್ತುಗಳು ಸಿಗುವಂತೆ ವ್ಯವಸ್ಥೆ ಮಾಡಲಾಗಿದ್ದು, 60ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತಿದೆ. ಅ. 11ರಂದು ಬೆಳಗ್ಗೆ 11ಕ್ಕೆ ಮೇಯರ್ ಜ್ಯೋತಿ ಪಾಟೀಲ ಅವರು ಮೇಳ ಉದ್ಘಾಟಿಸುವರು ಎಂದರು.

ಮೇಳದಿಂದ ಸಂಗ್ರಹಿಸಿದ ಹಣವನ್ನು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಲಾಗುವುದು. ಸಮಾಜದಲ್ಲಿ ಭಯಾನಕವಾಗಿ ಬೆಳೆಯುತ್ತಿರುವ ಕ್ಯಾನ್ಸರ್ ಅದರಲ್ಲೂ ವಿಶೇಷವಾಗಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ 9 ರಿಂದ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಎಚ್ ಪಿವಿ ಲಸಿಕೆ ಹಾಕಿಸುವ ಅಭಿಯಾನ ನಡೆಸಲಾಗುತ್ತಿದೆ. ನೂರು ಮಕ್ಕಳಿಗೆ ಲಸಿಕೆ ಹಾಕುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಕ್ಲಬ್ ಅಧ್ಯಕ್ಷೆ ಸುಷಾಮ ಹಿರೇಮಠ, ಕಾರ್ಯದರ್ಶಿ ರೇಖಾ ಪಾಟೀಲ, ಇವೆಂಟ್ ಕೋಆಡಿರ್ನೇಟರ್ ಪ್ರೇಮಾ ಪಾಟೀಲ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net