

ತುಮಕೂರು : ದೀಪಗಳ ಹಬ್ಬ ದೀಪಾವಳಿಗೆ ಸಂಭ್ರಮವನ್ನು ಈ ವರ್ಷ ಕರೊನಾ ಮಂಕಾಗಿಸಿದೆ, ಆತಂಕದ ನಡುವೆಯೇ ಎದುರಾಗಿರುವ ಹಬ್ಬದ ಆಚರಣೆಗೆ ಜನರು ಸಿದ್ಧರಾಗಿದ್ದರೂ ಜಾಗ್ರತೆ ಅತ್ಯಗತ್ಯವಾಗಿದೆ.
ಕರೊನಾ ನಿಯಂತ್ರಣ ಮಾರ್ಗಸೂಚಿಗಳ ಅನುಷ್ಟಾನಕ್ಕೆ ಜಿಲ್ಲಾಡಳಿತ ಮುಂದಾಗಿದೆ, ಗುರುವಾರ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಸಮಾನ ಮನಸ್ಕ ಇಲಾಖೆಗಳ ಸಭೆ ನಡೆಸಿದ್ದು ನಿಗಾವಹಿಸಲು ಕಾರ್ಯಪಡೆ ರಚಿಸಿದ್ದಾರೆ. ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು ಪಟಾಕಿ ಅಂಗಡಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪ್ರತಿವರ್ಷ 40ಕ್ಕಿಂತ ಹೆಚ್ಚು ಅಂಗಡಿಗಳಲ್ಲಿ ಪಟಾಕಿ ಮಾರಾಟ ನಡೆಯುತ್ತಿತ್ತು ಈ ವರ್ಷ ಕೇವಲ 5 ಅಂಗಡಿಗೆ ಮಾತ್ರ ಜಿಲ್ಲಾಡಳಿತದ ಅನುಮತಿ ಸಿಕ್ಕಿದೆ.
ಮಾರುಕಟ್ಟೆಯಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ತಪ್ಪಿದರೆ ಸ್ಥಳದಲ್ಲಿಯೇ ದಂಢ ವಿದಿಸಲು ಪಾಲಿಕೆ, ಪರಿಸರ, ಪೊಲೀಸ್ ಇಲಾಖೆಗಳ ಜಂಟಿ ಕಾರ್ಯಪಡೆ ರಚಿಲಾಗಿದೆ. ಜನರು ಸ್ವಯಂ ಪ್ರೇರಿತವಾಗಿ ಪಟಾಕಿಗಳಿಗೆ ಗುಡ್‌ಬೈ ಹೇಳಿ ಸಾಂಪ್ರದಾಯಿಕ ರೀತಿಯಲ್ಲಿ ದೀಪಗಳನ್ನು ಹಚ್ಚಬೇಕಿದ್ದು, ಈ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆ ಹಾಗೂ ಹೊರಪೇಟೆಯಲ್ಲಿ ದೀಪದ ಮಾರಾಟ ಹೆಚ್ಚಾಗಿದೆ, ಪಟಾಕಿ ಅಂಗಡಿಗಳತ್ತ ಜನರು ತೆರಳುವುದು ಕಡಿಮೆಯಾಗಿದ್ದು ದೀಪಹಚ್ಚುವ ಮೂಲಕ ದೀಪಾವಳಿ ಸಂಭ್ರಮ ಹೆಚ್ಚಿಸಿಕೊಳ್ಳಲು ನಗರವಾಸಿಗಳು ಸಿದ್ಧತೆ ನಡೆಸಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಹಸಿರು ಪಟಾಕಿ ಮಾರಾಟ ಹಾಗೂ ಸಿಡಿಸಲು ಸರ್ಕಾರ ಅನುಮತಿ ನೀಡಿದ್ದು ನಗರವಾಸಿಗಳು ಸಹಕಾರ ನೀಡಬೇಕು, ಎಲ್ಲಿಯೂ ಜನದಟ್ಟಣೆ ಇಲ್ಲದೆ ಅಂತರ ಕಾಯ್ದುಕೊಂಡು ಮಾರುಕಟ್ಟೆಯಲ್ಲಿ ವಸ್ತುಗಳನ್ನು ಕೊಂಡುಕೊಳ್ಳಬೇಕು. ನಿಗಾವಹಿಸಲು ನೋಡಲ್ ಅಧಿಕಾರಿ ನೇಮಿಸಿದ್ದು ಮಾರ್ಗಸೂಚಿ ಪಾಲಿಸದಿದ್ದರೇ ಸ್ಥಳದಲ್ಲಿಯೇ ದಂಢ ಹಾಕಲಾಗುವುದು. ರೇಣುಕಾ ಆಯುಕ್ತೆ, ತುಮಕೂರು ಮಹಾನಗರ ಪಾಲಿಕೆ