

ಕುಮಟಾ: ದೀಪಾವಳಿ ಮೇಳದಂತಹ ನಮ್ಮ ಪರಂಪರೆಯ ಸಂಭ್ರಮವನ್ನು ಶಿಕ್ಷಣ ಸಂಸ್ಥೆಯೊಂದು ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಿರುವುದು ವಿಶೇಷ. ಹೀಗಾಗಿ ಕೊಂಕಣ ಎಜುಕೇಷನ್ ಟ್ರಸ್ಟ್್ಟ ಶಿಕ್ಷಣದೊಟ್ಟಿಗೆ ಸಂಸ್ಕೃತಿಯ ಹರಿಕಾರನಾಗಿಯೂ ಕೆಲಸ ಮಾಡುತ್ತಿದೆ ಎಂದು ಬರಹಗಾರ್ತಿ ಶ್ರೀದೇವಿ ಕೆರೆಮನೆ ಹೇಳಿದರು.
ಇಲ್ಲಿನ ಕೊಂಕಣ ಎಜುಕೇಷನ್ ಟ್ರಸ್ಟಿನ ಸರಸ್ವತಿ ವಿದ್ಯಾಕೇಂದ್ರದ ಮೈದಾನದಲ್ಲಿ ಅಘನಾಶಿನಿ, ಕಾಳಿ, ಗಂಗಾವಳಿ, ಶರಾವತಿ, ವೆಂಕಟಾಪುರ ನದಿಗಳ ನೀರನ್ನು ಸಾಲಂಕೃತ ಹಂಡೆಗೆ ಎರೆಯುವ ಮೂಲಕ ದೀಪಾವಳಿ ನೀರೆರೆಯುವ ಶಾಸ್ತ್ರೋಕ್ತವಾಗಿ ಮತ್ತು ದೀಪ ಬೆಳಗಿ ದೀಪಾವಳಿ ಮೇಳಕ್ಕೆ ಚಾಲನೆ ನೀಡಲಾಯಿತು. ದೀಪಾವಳಿ ಸಂದೇಶ ನೀಡಿದ ಸಂಸ್ಕೃತ ಉಪನ್ಯಾಸಕ ಡಾ.ಕೇಶವ ಕಿರಣ ಬಿ., ನಮ್ಮೊಳಗಿನ ಜ್ಞಾನ ದೀಪ ಬೆಳಗಿಸಿಕೊಳ್ಳಲು ದೀಪಾವಳಿ ಸಕಾಲ. ಈ ಹಬ್ಬವು ಸಾಂಪ್ರದಾಯಿಕ ಆಚರಣೆಯೊಟ್ಟಿಗೆ ಬೌದ್ಧಿಕ ವಿಕಾಸಕ್ಕೂ ನಾಂದಿಯಾಗುತ್ತದೆ ಎಂದರು.
ಸಾಹಿತಿ ಪ್ರಮೋದ ಮೋಹನ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ಅಂಜದೆ ಮುಂದೆ ಸಾಗುವ ಕೌಶಲ ಬೆಳೆಸಿಕೊಳ್ಳಬೇಕು ಎಂದರು. ಸಂಸ್ಥೆಯ ಕಾರ್ಯದರ್ಶಿ ಮುರಳೀಧರ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯು ಸಂಸ್ಕಾರದ ಜತೆಗೆ ಶಿಕ್ಷಣ ಎನ್ನುವ ಪರಿಕಲ್ಪನೆಯಲ್ಲಿ ಮುಂದುವರಿಯುತ್ತಿದೆ. ಸುಸ್ಥಿರ ಸಮಾಜ ನಿರ್ಮಾಣ ನಮ್ಮ ಗುರಿ. ಈ ನಿಟ್ಟಿನಲ್ಲಿ ಮಾತೃ ಮಂಡಳಿ ಸ್ಥಾಪಿಸಿಕೊಂಡಿದ್ದು ದೀಪಾವಳಿ ಮೇಳ ಅದರ ಫಲಶ್ರುತಿಯಲ್ಲೊಂದು ಎಂದರು. ಸಂಸ್ಥೆಯ ಅಧ್ಯಕ್ಷ ವಿಠಲ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕಾರ್ಯದರ್ಶಿ ಶೇಷಗಿರಿ ಶಾನಭಾಗ, ವಿಶ್ವಸ್ಥರಾದ ಅಶೋಕ ಶಾನಭಾಗ, ಅನಂತ ಶಾನಭಾಗ, ದಾಸ ಶಾನಭಾಗ, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ಪ್ರಾಚಾರ್ಯ ಕಿರಣ ಭಟ್ಟ, ಉಪಪ್ರಾಚಾರ್ಯು ಸುಜಾತಾ ಹೆಗಡೆ, ಮುಖ್ಯಶಿಕ್ಷಕರಾದ ಸುಮಾ ಪ್ರಭು, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ ಹಾಗೂ ಮಾತೃಮಂಡಳಿಯ ಪೂಜಾ ಕಾಮತ, ಸ್ನೇಹಾ ಕಾಮತ, ಶ್ವೇತಾ ಭಟ್ಟ, ಜ್ಯೋತಿ ನಾಯ್ಕ, ಭಾಗ್ಯಶ್ರೀ ನಾಯ್ಕ, ಸಂಜನಾ ಶೇಟ್, ಗೀತಾ ನಾಯ್ಕ, ರಚನಾ ರೇವಣಕರ, ಯಶಸ್ವಿನಿ ನಾಯ್ಕ, ಶೈಲಾ ಗೌಡ, ಶೀತಲ ಭಂಡಾರಿ, ಪ್ರಜ್ಞಾ ಶಾನಭಾಗ ವೇದಿಕೆಯಲ್ಲಿದ್ದರು. ಮಾತೆಯರಿಗಾಗಿ ಆಯೋಜಿಸಿದ್ದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಶಿಕ್ಷಕ ಗಣೇಶ ಜೋಶಿ ಸ್ವಾಗತಿಸಿದರು. ವಿಶ್ವಸ್ಥ ರಮೇಶ ಪ್ರಭು ವಂದಿಸಿದರು.
ಬಾಲಮಂದಿರದ ಮಕ್ಕಳು ದೇವತೆಗಳ ವೇಷತೊಟ್ಟು ಗಮನ ಸೆಳೆದರು. ವಿದ್ಯಾರ್ಥಿಗಳು ಹಾಗೂ ಮಾತೃಮಂಡಳಿಯವರಿಂದ ಆಯೋಜಿಸಿದ್ದ ಸಾಂಸೃ್ಕಕ ಕಾರ್ಯಕ್ರಮ ರಂಜಿಸಿತು. ಮೇಳದ ಅಂಗವಾಗಿ ವಿದ್ಯಾರ್ಥಿಗಳು, ಪಾಲಕರಿಂದ ತಿಂಡಿತಿನಿಸು ಮುಂತಾದ ಮಳಿಗೆಗಳನ್ನು ಸಂಯೋಜಿಸಿದ್ದರು. ಕೊನೆಯಲ್ಲಿ ನರಕಾಸುರನ ಬೃಹತ್ ಪ್ರತಿಕೃತಿ ದಹನದೊಂದಿಗೆ ಮೇಳ ಸಂಪನ್ನಗೊಂಡಿತು.