

ಉಡುಪಿ: ದಿವ್ಯಾಂಗ ವ್ಯಕ್ತಿಗಳು ಸಮಾಜಕ್ಕೆ ಹೊರೆಯಲ್ಲ. ಅವರಲ್ಲಿ ಕೂಡ ಉತ್ತಮವಾದ ಪ್ರತಿಭೆಗಳಿದ್ದು ಅದಕ್ಕೆ ಸೂಕ್ತ ಪ್ರೋತ್ಸಹ ಲಭಿಸಿದಾಗ ಅತ್ಯುತ್ತಮ ಸಾಧನೆ ತೋರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೂಡ ದಿವ್ಯಾಂಗರಿಗೆ ಪ್ರೋತ್ಸಾಹ ನೀಡಬೇಕು ಎಂದು ಉಡುಪಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಧರ್ಮಪ್ರಾಂತ್ಯದ ಕುಟುಂಬ ಆಯೋಗದ ವತಿಯಿಂದ ಆಯೋಜಿಸಿದ್ದ ದಿವ್ಯಾಂಗರ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ ನ್ಯೂನ್ಯತೆಯಿಂದ ಬಳಲುತ್ತಿರುವ ದಿವ್ಯಾಂಗರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುವಂತೆ ಈಗಾಗಲೇ ಕ್ರೆಸ್ತ ಜಗದ್ಗುರು ಪೋಪ್ ಫ್ರಾನ್ಸಿಸ್ ಜಗತ್ತಿಗೆ ಕರೆ ನೀಡಿದ್ದಾರೆ. ಧರ್ಮಪ್ರಾಂತ್ಯ ಮಟ್ಟದಲ್ಲಿ ದಿವ್ಯಾಂಗ ಮಕ್ಕಳಿಗೆ ಕೂಡ ಉತ್ತಮ ಶಿಕ್ಷಣ ಪಡೆಯಲು ಹಾಗೂ ಸರ್ಕಾರದಿಂದ ಲಭಿಸುವ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಮೂಲಕ ದಿವ್ಯಾಂಗರು ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾಭಿಮಾನದಿಂದ ಬದಕುವಂತಹ ವ್ಯವಸ್ಥೆ ಆಗಬೇಕಾಗಿದೆ ಎಂದರು.
ಧಮಾರ್ಧ್ಯಕ್ಷರಿಗೆ ಸನ್ಮಾನ
75 ವರ್ಷಗಳ ಹುಟ್ಟು ಹಬ್ಬ ಹಾಗೂ ಧಮಾರ್ಧ್ಯಕ್ಷರಾಗಿ 25 ವರ್ಷಗಳನ್ನು ಪೊರೈಸಿದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ದಿವ್ಯಾಂಗರ ತಂಡದಿಂದ ಸನ್ಮಾನಿಸಲಾಯಿತು. ಮಾನಸ ವಿಶೇಷ ಶಾಲೆಯ ಮಕ್ಕಳು ನೃತ್ಯಗಳನ್ನು ಪ್ರದರ್ಶಿಸಿದರು. ಎಂಸಿ ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿದರು. ಕರ್ನಾಟಕ ಪ್ರಾಂತೀಯ ದಿವ್ಯಾಂಗರ ಆಯೋಗದ ಕಾರ್ಯದರ್ಶಿ ಎಸ್ತೆರ್ ಡಿಸೋಜಾ, ಅನುಗ್ರಹ ಪಾಲನಾ ಕೆಂದ್ರದ ನಿರ್ದೇಶಕ ಹಾಗೂ ಕೆಥೊಲಿಕ ಶಿಕ್ಷಣ ಸೊಸೈಟಿ ಧರ್ಮಪ್ರಾಂತ್ಯದ ಕಾರ್ಯದರ್ಶಿ ವಿನ್ಸೆಂಟ್ ಕ್ರಾಸ್ತಾ, ಕುಟುಂಬ ಆಯೋಗದ ನಿರ್ದೇಶಕ ಡಾ.ರೋಶನ್ ಡಿಸೋಜಾ, ಸಂಯೋಜಕಿ ಸಿಸ್ಟರ್ ವಿನ್ನಿ, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ಆರೋಗ್ಯ ಆಯೋಗದ ನಿರ್ದೇಶಕ ಡಾ.ಎಡ್ವರ್ಡ್ ಲೋಬೊ, ಬೈಬಲ್ ಆಯೋಗದ ನಿರ್ದೇಶಕ ಸಿರಿಲ್ ಲೋಬೊ, ಉಜ್ವಾಡ್ ಪತ್ರಿಕೆಯ ಸಂಪಾದಕ ಆಲ್ವಿನ್ ಉಪಸ್ಥಿತರಿದ್ದರು. ಕುಟುಂಬ ಆಯೋಗದ ನಿರ್ದೇಶಕರಾದ ಲೆಸ್ಲಿ ಆರೋಜಾ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.