

ಮೈಸೂರು: ವಿಚ್ಛೇದಿತ ಹಾಗೂ 40 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರನ್ನು ಮದುವೆಯಾಗಿ ಕೋಟ್ಯಂತರ ರೂ. ವಂಚಿಸುತ್ತಿದ್ದ ವ್ಯಕ್ತಿಯ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.
ವಿಜಯನಗರ ನಿವಾಸಿ ಪ್ರೀತಿ ಸಿಂಗ್ ನೀಡಿದ ದೂರಿನ ಮೇಲೆ ಕೇರಳ ಮೂಲದ ನಿವಾಸಿ ಸುನೀಶ್ ಪಿಳ್ಳೆ (33)ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಪ್ರೀತಿ ಸಿಂಗ್‌ರನ್ನು ಸುನೀಶ್ ಪಿಳ್ಳೆ ಐದು ವರ್ಷದ ಹಿಂದೆ ವಿವಾಹವಾಗಿದ್ದು, ನಾಲ್ಕು ವರ್ಷದ ಹೆಣ್ಣು ಮಗುವಿದೆ. ವಿವಾಹದ ಬಳಿಕ ಆಗಾಗ್ಗೆ ಹಣಕ್ಕಾಗಿ ಪೀಡಿಸುತ್ತಿದ್ದ ಸುನೀಶ್, ಮನೆಯಲ್ಲಿದ್ದ ಚಿನ್ನಾಭರಣವಗಳನ್ನು ಅಡವಿಟ್ಟು ಲಕ್ಷಾಂತರ ರೂ. ಪಡೆದಿದ್ದ. ಆಗಾಗ್ಗೆ ಮನೆಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ. ಈ ಬಗ್ಗೆ ಪ್ರೀತಿ ಸಿಂಗ್ ಅವರು, ಸುನೀಶ್ ಪಿಳ್ಳೆ ಪಾಲಕರಿಗೆ ಮಾಹಿತಿ ನೀಡಿದ್ದು, ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಕೊನೆಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಕೈ ಚೆಲ್ಲಿದ್ದರು. ಈತನ ಜತೆಗೆ ಈತನ ಕುಟುಂಬದ ನಾಲ್ವರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮಹಿಳೆಯರನ್ನು ವಂಚಿಸುತ್ತಿದ್ದ
ಈತ ಮ್ಯಾಟ್ರಿಮೋನಿಯಲ್ಲಿ ಶ್ರೀಮಂತ ಉದ್ಯಮಿ ಎಂದು ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡು ಮಹಿಳೆಯರನ್ನು ಪರಿಚಯಿಸಿಕೊಂಡು ಮದುವೆಯಾಗುತ್ತಿದ್ದ. ಬಳಿಕ ಅವರೊಂದಿಗೆ ಕೆಲ ತಿಂಗಳು ಸಂಸಾರ ನಡೆಸಿ, ಉದ್ಯಮದಲ್ಲಿ ನಷ್ಟವಾಗಿದೆ ಎಂದು ಹಣ ಪಡೆದು ವಂಚಿಸಿ ಪರಾರಿಯಾಗುತ್ತಿದ್ದ. ಈ ಬಗ್ಗೆ ಈಗಾಗಲೇ ಬೆಂಗಳೂರಿನಲ್ಲಿ ನಾಲ್ಕೈದು ಪ್ರಕರಣಗಳು ದಾಖಲಾಗಿವೆ. ವೈದ್ಯರು, ಸಾಫ್ಟ್‌ವೇರ್ ಇಂಜಿನಿಯರ್, ಶ್ರೀಮಂತ ವಿಚ್ಛೇದಿತ ಮಹಿಳೆಯರನ್ನು ಈತ ಪರಿಚಯ ಮಾಡಿಕೊಂಡು, ವಿವಾಹವಾಗಿ ಲಕ್ಷಾಂತರ ರೂ. ಪಡೆದು ವಂಚಿಸಿದ್ದಾನೆ.