

ಬೆಂಗಳೂರು: ‘ಸಾವಿರ ಸುಳ್ಳು ಹೇಳಿ ಮದುವೆ ಮಾಡು’ ಎಂಬುದು ಹಳೇ ಮಾತು. ಆದರೆ, ಇಲ್ಲಿ ಒಂದೇ ಒಂದು ಸತ್ಯ ಮುಚ್ಚಿಟ್ಟ ಕಾರಣಕ್ಕಾಗಿಯೇ ದಾಂಪತ್ಯ ಮುರಿದುಬಿದ್ದಿದೆ! ಕ್ರಿಮಿನಲ್ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ ವಿಚಾರ ಮುಚ್ಚಿಟ್ಟಿದ್ದ ಪತಿಯಿಂದ ಪತ್ನಿ ವಿಚ್ಛೇದನ ಪಡೆದುಕೊಂಡಿದ್ದಾಳೆ.
ಕಾಲೇಜು ದಿನಗಳಲ್ಲಿ ತನಗಿಂತ 1 ವರ್ಷ ಚಿಕ್ಕವನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿಗೆ ಬಳಿಕ ಪತಿ ಚಿರತೆ ಚರ್ಮ ಮಾರಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದ ವಿಚಾರ ತಡವಾಗಿ ತಿಳಿದಿತ್ತು. ಪತಿಯಿಂದ ದೂರ ಉಳಿದಿದ್ದ ಪತ್ನಿ ಹೈಕೋರ್ಟ್ ಮೆಟ್ಟಿಲೇರಿ ವಿಚ್ಛೇದನ ಪಡೆದುಕೊಂಡಿದ್ದಾಳೆ.
ಪ್ರಕರಣವೇನು?: ಎಂಬಿಎ ವಿದ್ಯಾರ್ಥಿನಿಯಾಗಿದ್ದ ಯುವತಿಗೆ ಅದೇ
ಕಾಲೇಜಿನ ಬಿಬಿಎಂ ವಿದ್ಯಾರ್ಥಿ ಮೇಲೆ ಪ್ರೀತಿ ಮೂಡಿತ್ತು. ಬಳಿಕ ಹೆತ್ತವರಿಗೆ ವಿಷಯ ತಿಳಿಸದೆ 2012ರ ಅ.31ರಂದು ಮದುವೆಯಾಗಿದ್ದರು. ಕೆಲವೇ ದಿನಗಳಲ್ಲಿ ಯುವತಿ ಪತಿಯನ್ನು ತೊರೆದು ಪಾಲಕರ ಮನೆ ಸೇರಿದ್ದಳು. ಗಂಡ
ನೊಂದಿಗೆ ಮಾತನಾಡಲು, ಭೇಟಿಯಾಗಲು ನಿರಾಕರಿಸುತ್ತಿದ್ದಳು. ವರ್ಷವಾದರೂ ಪತ್ನಿ ಹಿಂದಿರುಗದ ಕಾರಣ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದ ಪತಿ, ಪಾಲಕರ ಒತ್ತಾಯದಿಂದ ಪತ್ನಿ ತನ್ನಿಂದ ದೂರ ಉಳಿದಿದ್ದಾಳೆ. ಆದ್ದರಿಂದ, ತನ್ನ ದಾಂಪತ್ಯ ಜೀವನ ಮರುಸ್ಥಾಪಿಸಬೇಕೆಂದು ಕೋರಿದ್ದ. ಮತ್ತೊಂದೆಡೆ, ಪತ್ನಿ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿದ್ದಳು.
ಪತಿ ಬೇಡವೆಂದ ಪತ್ನಿ: ಪ್ರೀತಿಸಿ ಮದುವೆಯಾಗಿದ್ದು ಸತ್ಯವಾದರೂ, ತನ್ನ ವಿರುದ್ಧ ಕ್ರಿಮಿನಲ್ ಪ್ರಕರಣವಿರುವ ವಿಚಾರವನ್ನು ಪತಿ ಮುಚ್ಚಿಟ್ಟಿದ್ದ. ಅಪರಾಧ ಹಿನ್ನೆಲೆಯುಳ್ಳವರ ಪರಿಚಯ ಹೊಂದಿರುವ ಆತ, ಸಮಾಜಘಾತಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಪುಣೆಯಲ್ಲಿ ಚಿರತೆ ಚರ್ಮ ಮಾರಾಟ ಮಾಡಲು ಯತ್ನಿಸಿದ್ದ ಆತನನ್ನು ಪೊಲೀಸರು ಬಂಧಿಸಿದ್ದರು. 15 ದಿನ ಜೈಲು ವಾಸವನ್ನೂ ಅನುಭವಿಸಿದ್ದಾನೆ. ಈ ವಿಚಾರ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವಿಷಯ ಹರಿದಾಡಿದೆ. ಇದರಿಂದ ನನ್ನ ಕುಟುಂಬ ಹಾಗೂ ಸ್ನೇಹಿತರ ಮಧ್ಯೆ ನನಗೆ ಅಪಮಾನವಾಗಿದೆ. ಹೊರಜಗತ್ತಿಗೆ ಮುಖ ತೋರಿಸಲಾಗದೆ ಖಿನ್ನತೆಗೆ ಒಳಗಾಗಿದ್ದೇನೆ. ಇದೇ ಕಾರಣದಿಂದ ಎಂಬಿಎ ಪದವಿಯನ್ನೂ ಪೂರ್ಣಗೊಳಿಸಲಾಗಿಲ್ಲ. ಗಂಡನಿಂದಾಗಿ ನನ್ನ ಘನತೆಗೆ ಚ್ಯುತಿ ಬಂದಿದೆ ಎಂದು ಆಕ್ಷೇಪಿಸಿದ್ದ ಪತ್ನಿ, ಪತಿಯೊಂದಿಗೆ ಸಂಸಾರ ನಡೆಸಲು ನಿರಾಕರಿಸಿದ್ದಳು.
ಅರ್ಜಿ ವಜಾಗೊಂಡಿತ್ತು: ಪತ್ನಿಯ ಆರೋಪಗಳನ್ನು ಪತಿ ಅಲ್ಲಗಳೆದಾಗ, ಪತ್ನಿ ಪುಣೆ ಪೊಲೀಸರು ಗಂಡನ ವಿರುದ್ಧ ದಾಖಲಿಸಿದ್ದ ಎಫ್ಐಆರ್ ಹಾಗೂ ದೋಷಾರೋಪಪಟ್ಟಿ ಪ್ರತಿಗಳನ್ನು ಕೋರ್ಟ್ಗೆ ಹಾಜರá-ಪಡಿಸಿದ್ದಳು. ಒಂದು ವೇಳೆ ಕೋರ್ಟ್ ಆದೇಶ ನೀಡಿದರೂ ಪತಿಯೊಂದಿಗೆ ತೆರಳುವುದಿಲ್ಲ ಎಂದು ಹೇಳಿದ್ದಳು. ಬಳಿಕ, 9 ಲಕ್ಷ ರೂ. ಮೌಲ್ಯದ ಚಿರತೆ ಚರ್ಮವನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ವಿಚಾರವನ್ನು ಒಪ್ಪಿಕೊಂಡಿದ್ದ ಪತಿ, ಪ್ರಕರಣವಿನ್ನೂ ಪುಣೆ ನ್ಯಾಯಾಲಯದಲ್ಲಿ ಬಾಕಿ ಇರುವುದಾಗಿ ತಿಳಿಸಿದ್ದ. ವಾದ ಆಲಿಸಿದ್ದ ಕೌಟುಂಬಿಕ ನ್ಯಾಯಾಲಯ, ಪತ್ನಿಯ ಮೇಲೆ ಪತಿ ಕ್ರೌರ್ಯವೆಸಗಿದ್ದಾನೆ ಎಂಬುದನ್ನು ಸಾಬೀತು ಪಡಿಸಲು ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಕ್ರಿಮಿನಲ್ ಪ್ರಕರಣ ದಾಖಲಾದ ಮಾತ್ರಕ್ಕೆ ಅದನ್ನು ಕ್ರೌರ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಮುಂದೆ ಇಬ್ಬರೂ ಒಂದಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಪತ್ನಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದಳು.
ಹೈಕೋರ್ಟ್ ಹೇಳಿದ್ದೇನು?
ಕ್ರಿಮಿನಲ್ ಪ್ರಕರಣದ ವಿಚಾರವನ್ನು ಪತಿ ಒಪ್ಪಿಕೊಂಡಿದ್ದಾನೆ. ಪ್ರಕರಣದಲ್ಲಿ ವಿಚ್ಛೇದನ ನೀಡಲು ಗಣನೀಯ ಕಾರಣಗಳಿಲ್ಲವಾದರೂ ಪತಿ-ಪತ್ನಿಯರಿಬ್ಬರ ಅಪ್ರಬುದ್ಧತೆಯಿಂದ ಮದುವೆ ನಡೆದಿದೆ ಎಂದು ತಿಳಿದುಬರುತ್ತಿದೆ.
ಶ್ರೀಮಂತನಾಗಬೇಕೆಂಬ ಉದ್ದೇಶದಿಂದ ಅಪರಾಧ ಕೃತ್ಯಕ್ಕೆ ಕೈಹಾಕಿರುವ ಯುವಕನ ನಡೆ ವಿಲಕ್ಷಣ. ಈ ವಿಚಾರವನ್ನು ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಗಂಡ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದಾಗ ಪತ್ನಿ ಸಹಜವಾಗಿ ಮಾನಸಿಕ ಆಘಾತಕ್ಕೆ ಒಳಗಾಗುತ್ತಾಳೆ. ಇದು ಮಾನಸಿಕ ಕ್ರೌರ್ಯವೂ ಆಗಿದೆ.
ಗಂಡನ ಜತೆ ವಾಸಿಸಲು ಪತ್ನಿಗೆ ಇಷ್ಟವಿಲ್ಲದಿರುವಾಗ, ಇಬ್ಬರಿಗೂ ವಿಚ್ಛೇದನ ನೀಡಿ ಸ್ವತಂತ್ರವಾಗಿ ಜೀವಿಸಲು ಅವಕಾಶ ನೀಡುವುದೇ ಮುಂದಿರುವ ದಾರಿ.
ಜಗನ್ ರಮೇಶ್