

ವಿಜಯಪುರ:ಜಿಲ್ಲೆಯ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಗೃಹ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಜತೆಗೆ ಪ್ರಯಾಣಿಕ ಸ್ನೇಹಿ ಶೌಚಗೃಹ ನಿರ್ವಹಣೆಗೆ ಕಾರ್ಮಿಕ ಇಲಾಖೆಯಡಿ ನೋಂದಾಯಿತ ಗುತ್ತಿಗೆದಾರರಿಗೆ ಇ&ಟೆಂಡರ್ ಮೂಲಕ ಆಯ್ಕೆ ಮಾಡಿ ಪರವಾನಗಿ ನೀಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಹೇಳಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸ್ಥಳಿಯ ವಿಭಾಗ, ಜಿಲ್ಲಾಡಳಿತ ಹಾಗೂ ರೋಟರಿ ಕ್ಲಬ್ಗಳ ಸಹಯೋಗದಲ್ಲಿ ಪ್ರಯಾಣಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಉದ್ದೇಶದಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಒಂದು ದಿನದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರವಾನಗಿ ಪಡೆದ ಗುತ್ತಿಗೆದಾರರು ನಿತ್ಯ ಬಸ್ ನಿಲ್ದಾಣ ಸ್ವಚ್ಛತೆ ಪರಿಶೀಲನೆಗೆ "ಬಸ್ ನಿಲ್ದಾಣಗಳ ಸ್ವಚ್ಛತೆ ವಿಜಯಪುರ ವಿಭಾಗ' ವಾಟ್ಸ್& ಆ್ಯಪ್ ಗ್ರೂಪ್ ರಚಿಸಿದ್ದು, ನಿತ್ಯ ಮೂರು ಬಾರಿ ಬಸ್ ನಿಲ್ದಾಣ ಸ್ವಚ್ಛಗೊಳಿಸಿರುವ ಕುರಿತು ಜಿಪಿಎಸ್ ಆಧಾರಿತ ಫೋಟೊ ಅಪ್ಲೋಡ್ ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.
ಬಸ್ ನಿಲ್ದಾಣದ ಪರಿವೀಕ್ಷಣಾ ಸಮಯದಲ್ಲಿ ಸ್ವಚ್ಛತೆ ಬಗ್ಗೆ ನ್ಯೂನತೆ ಕಂಡು ಬಂದಲ್ಲಿ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಲಾಗುವುದಲ್ಲದೆ, ದಂಡ ವಿಧಿಸಲು ಕ್ರಮವಹಿಸಲಾಗಿದೆ. ಅದರಂತೆ ಇತ್ತೀಚೆಗೆ ಹೊಸದಾಗಿ ಆಯ್ಕೆಯಾದ ಸ್ವಚ್ಛತಾ ಪರವಾನಗಿ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಸ್ವಚ್ಛತೆಗಾಗಿ ಉಪಯೋಗಿಸಲು ಕಟ್ಟುನಿಟ್ಟಾಗಿ ನಿರ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೆಲವು ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಟಕ ಸ್ಥಾಪಿಸಲಾಗಿದೆ. ಇಂಡಸ್ಟ್ರೀಯಲ್ ಫ್ಯಾನ್, ನ ತ್ಯಾಜ್ಯ ವಿಲೇವಾರಿಗಾಗಿ ಡಸ್ಟ್ ಬಿನ್, ಮೊಬೈಲ್ ಚಾರ್ಜರ್ ಪಾಯಿಂಟ್ ಸಹ ಅಳವಡಿಸಲಾಗಿದೆ. ಅಲ್ಲದೆ, ಮಹಿಳಾ ವಿಶ್ರಾಂತಿ ಕೊಠಡಿ ಹಾಗೂ ಹಾಲುಣಿಸುವ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ರೋಟರಿ ಕ್ಲಬ್ನ ಅಧ್ಯಕ್ಷ ಪ್ರಾಣೇಶ ಜಹಾಗೀರದಾರ ಮಾತನಾಡಿ, ಸಾರ್ವಜನಿಕರು ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ವಿಜಯಪುರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಸಿಬ್ಬಂದಿ ಸ್ವಚ್ಚತಾ ಶ್ರಮದಾನ ನಡೆಸಿದರು.