

ಬಂಟ್ವಾಳ: ದೈವತ್ವ ಪ್ರಕಟಿಸಲು ಧ್ಯಾನ ಮಾಡಬೇಕು. ಭಗವಂತನ ಚಿಂತನೆ ಮಾಡಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕಾಚೈತನ್ಯಾನಂದ ಸ್ವಾಮೀಜಿ ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಬಿ.ಸಿ.ರೋಡ್‌ನ ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ಆಯೋಜಿಸಲಾದ ಮಹಾಶಿವರಾತ್ರಿ ದ್ವಾದಶ ಜ್ಯೋತಿರ್ಲಿಂಗ ಪ್ರದರ್ಶನದ ಪ್ರಯುಕ್ತ, ಬುಧವಾರ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶಾಶ್ವತ ಸುಖ ಇಲ್ಲವಾದರೆ ಜೀವನ ವ್ಯರ್ಥವಾಗುತ್ತದೆ. ಭಗವಂತನೆ ಆರಾಧನೆಗೆ ಆಡಂಬರ ಬೇಕಾಗಿಲ್ಲ. ಭಗವಂತನಲ್ಲಿ ಶ್ರದ್ಧೆ ಬೇಕು. ಅವನನ್ನು ಪ್ರೀತಿಸಬೇಕು. ನಾಮಸ್ಮರಣೆಯಿಂದ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯವಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ, ವಕೀಲ ಅಶ್ವನಿ ಕುಮಾರ್ ರೈ, ಉದ್ಯಮಿಗಳಾದ ಐತಪ್ಪ ಆಳ್ವ, ಅಜಿತ್ ಶೆಟ್ಟಿ ಅಡ್ಯಾರ್‌ಗುತ್ತು, ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ತುಂಬೆ ಕಾಲೇಜಿನ ಪ್ರಾಂಶುಪಾಲ ವಿ.ಸುಬ್ರಹ್ಮಣ್ಯ ಭಟ್, ಮುಖ್ಯಶಿಕ್ಷಕರಾದ ಕಮಲಾಕ್ಷ ಕೆ, ಮಾಲತಿ ಕೆ, ಸುರೇಖಾ ಕೆ, ನರಿಕೊಂಬು ಪಂಚಾಯಿತಿ ಸದಸ್ಯೆ ಉಷಾ ಜಿ. ಉಪಸ್ಥಿತರಿದ್ದರು.
ಸುಚೇತಾ ಶೆಟ್ಟಿ ಸ್ವಾಗತಿಸಿದರು. ಬ್ರಹ್ಮಕುಮಾರಿ ಸಾವಿತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕುಮಾರ ಗಣಪತಿ ಕಾರ್ಯಕ್ರಮ ನಿರೂಪಿಸಿದರು.