ಪಳಂಗೋಟಿ ಪಿ. ದಿವಿನ್‌ಗೆ ಅಂತಿಮ ನಮನ

divin
Published on

ಶನಿವಾರಸಂತೆ:

ಹುತಾತ್ಮ ಪಳಂಗೋಟು ದಿವಿನ್ ಓದಿ, ಆಡಿ ಬೆಳೆದ ಆಲೂರು ಸಿದ್ದಾಪುರ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಬೆಳಗ್ಗಿನಿಂದಲೇ ಕಾದು ನಿಂತಿದ್ದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ಅಂತಿಮ ನಮನ ಸಲ್ಲಿಸಿದರು. ಭಾರತ್ ಮಾತಾ ಕಿ ಜೈ... ದಿವಿನ್ ಅಮರ್ ರಹೇ...ಮತ್ತೊಮ್ಮೆ ಹುಟ್ಟಿ ಬಾ ದಿವಿನ್.. ಘೋಷಣೆಗಳು ಮೊಳಗಿದವು.

ಕರುಳಿನ ಕುಡಿ ಕಳೆದುಕೊಂಡ ದುಃಖದಲ್ಲಿ ಅತ್ತು ಅತ್ತು ಕಣ್ಣೀರೆಲ್ಲಾ ಬತ್ತಿ ಹೋಗಿ ಮಗನ ಮುಖವನ್ನೇ ದಿಟ್ಟಿಸುತ್ತ ಬಸವಳಿದು ಕುಳಿತಿದ್ದ ಹುತಾತ್ಮ ಯೋಧ ಪಳಂಗೋಟು ದಿವಿನ್ ತಾಯಿ ಜಲಜಾಕ್ಷಿ ಕಳೆದ ವರ್ಷವಷ್ಟೇ ಪತಿ, ಈಗ ಮಗನನ್ನು ಕಳೆದುಕೊಂಡಿರುವ ನತದೃಷ್ಟೆ... ಈಕೆಯನ್ನು ಸಮಾಧಾನ ಪಡಿಸುತ್ತಿದ್ದ ಬಂಧುಗಳು... ಕುಟುಂಬದ ದುಃಖದಲ್ಲಿ ನಾವೂ ಭಾಗಿಗಳು ಎನ್ನುವ ನೈತಿಕ ಬೆಂಬಲ ಕೊಡಲು ಕ್ರೀಡಾಂಗಣದ ತುಂಬೆಲ್ಲಾ ತುಂಬಿದ ಸಾರ್ವಜನಿಕರು, ಶಾಲಾ ಮಕ್ಕಳು. ವೀರಯೋಧನಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದ ಮಾಜಿ ಸೈನಿಕರು. ಒಟ್ಟಾರೆ ಅಲ್ಲಿ ಒಂದು ರೀತಿಯ ಭಾವನಾತ್ಮನಕ ಸನ್ನಿವೇಶ ನಿರ್ಮಾಣ ಆಗಿತ್ತು.

ಕಾಶ್ಮೀರದಲ್ಲಿ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವಿನ ಬದುಕಿನ ಹೋರಾಟ ನಡೆಸಿ ಕೊನೆಗೆ ಜವರಾಯನ ಎದುರು ಸೋಲೊಪ್ಪಿಕೊಂಡು ಹುತಾತ್ಮರಾದ ವೀರ ಯೋಧ ಪಳಂಗೋಟು ದಿವಿನ್ ಅವರ ಪಾರ್ಥಿವ ಶರೀರ ಮಂಗಳವಾರ ರಾತ್ರಿ ತವರು ಜಿಲ್ಲೆಗೆ ಪ್ರವೇಶ ಮಾಡಿತ್ತು. ರಾತ್ರಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದ್ದ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೋಸ್ಕರ ಬುಧವಾರ ಬೆಳಗ್ಗೆ 10 ಗಂಟೆ ತನಕ ಕುಶಾಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇಡಲಾಗಿತ್ತು.

ಬೆಳಗ್ಗೆ 7 ಗಂಟೆಯಿAದಲೇ ತಂಡೋಪತAಡವಾಗಿ ಆಗಮಿಸಿದ ಸಾರ್ವಜನಿಕರು ಹುತಾತ್ಮ ಯೋಧ ಪಳಂಗೋಟು ದಿವಿನ್ ಅವರ ಪಾರ್ಥಿವ ಶರೀರಕ್ಕೆÀ ಅಂತಿಮ ನಮನ ಸಲ್ಲಿಸಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಉಪವಿಭಾಗಾಧಿಕಾರಿ ವಿನಾಯಕ ನಾರ್ವಡೆ ಕುಶಾಲನಗರದಲ್ಲೇ ಪುಷ್ಪ ನಮನ ಸಲ್ಲಿಸಿದರು. ನಂತರ ದಿವಿನ್ ಸ್ವಂತ ಊರು ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರಕ್ಕೆ ಸೇನಾ ವಾಹನದಲ್ಲಿ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಯಿತು.

ಮುಳ್ಳುಸೋಗೆ, ಕೂಡ್ಲೂರು, ಕೂಡುಮಂಗಳೂರು, ಕೂಡಿಗೆ, ಹಳೆಕೂಡಿಗೆ, ಕಣಿವೆ, ಹುಲುಸೆ, ಹೆಬ್ಬಾಲೆ, ಅರಸಿನಗುಪ್ಪೆ, ಅಳುವಾರ, ಸಿದ್ದಲಿಂಗಪುರ, ಬಾಣವಾರ, ಸಂಗಯ್ಯನಪುರ.. ಹೀಗೆ ಪಾರ್ಥಿವ ಶರೀರ ಹೊತ್ತ ವಾಹನ ಸಾಗಿದ ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ದಿವಿನ್‌ಗೆ ಅಂತಿಮ ನಮನ ಸಲ್ಲಿಸಿದರು. ಭಾರತ್ ಮಾತಾ ಕಿ ಜೈ... ದಿವಿನ್ ಅಮರ್ ರಹೇ...ಮತ್ತೊಮ್ಮೆ ಹುಟ್ಟಿ ಬಾ ದಿವಿನ್ ಎನ್ನುವ ಘೋಷಣೆಗಳನ್ನು ಕೂಗಿದರು.

ಮರಾಠ ರೆಜಿಮೆಂಟ್‌ನ ಲ್ಯಾನ್ಸ್ ಹವಾಲ್ದಾರ್ ದಿವಿನ್ ಅವರ ಪಾರ್ಥಿವ ಶರೀರವನ್ನು ಅವರು ಓದಿದ ಆಲೂರು ಸಿದ್ದಾಪುರ ಕಾಲೇಜು ಆವರಣಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ವಿದ್ಯಾರ್ಥಿಗಳು, ಮಾಜಿ ಸೈನಿಕರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಪಾರ್ಥಿವ ಶರೀರ ಕ್ರೀಡಾಂಗಣ ತಲುಪುತ್ತಿದ್ದಂತೆಯೇ ಅಲ್ಲಿ ಸೇರಿದ್ದವರು ಗದ್ಗದಿತರಾದರು.

ಎಸ್‌ಪಿ ಕೆ. ರಾಮರಾಜನ್ ನೇತೃತ್ವದಲ್ಲಿ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್. ಸುಂದರ್ ರಾಜ್, ಪ್ರೊಬೆಷನರಿ ಎಸ್‌ಪಿ ಡಾ. ಬೆನಕ ಪ್ರಸಾದ್, ಸೋಮವಾರಪೇಟೆ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭ ಇದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ, ಧರ್ಮಜ ಉತ್ತಪ್ಪ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಸಚಿವ ಅಪ್ಪಚ್ಚು ರಂಜನ್ ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದರು.

ಆಲೂರು ಸಿದ್ದಾಪುರ ಗ್ರಾಮದಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡುವ ಮೂಲಕ ಸ್ಥಳೀಯ ವ್ಯಾಪರಸ್ಥರು ಹುತಾತ್ಮ ಯೋಧ ದಿವಿನ್‌ಗೆ ತಮ್ಮ ಗೌರವ ಸಲ್ಲಿಸಿದರು.

ಆಲೂರು ಸಿದ್ದಾಪುರ ಕಾಲೇಜು ಕ್ರೀಡಾಂಗಣದಲ್ಲಿ ಹುತಾತ್ಮ ಯೋಧ ದಿವಿನ್ ಅಂತಿಮ ದರ್ಶನಕ್ಕೆ ಸಂಬAಧಿಸಿದವರು ಸೂಕ್ತ ವ್ಯವಸ್ಥೆ ಮಾಡಿಲ್ಲ ಎನ್ನುವ ಆಕ್ರೋಶ ವ್ಯಕ್ತವಾಯಿತು. ಈ ಸಂಬAಧ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡಿದವು. ಈ ರೀತಿಯ ಬೇಜವಾಬ್ದಾರಿತನದ ವರ್ತನೆ ಯಾಕೆ ? ದಿವಿನ್ ಹುತಾತ್ಮರಾದ ನಂತರ ಮೂರು ದಿನಗಳ ಕಾಲಾವಕಾಶ ಸಿಕ್ಕಿದ್ದರೂ ಸರಿಯಾದ ವ್ಯವಸ್ಥೆ ಯಾಕೆ ಮಾಡಿಲ್ಲ ? ಎಂದು ಹಲವರು ಪ್ರಶ್ನಿಸಿದರು. ಶಾಲಾ ಮಕ್ಕಳು, ಸಾರ್ವಜನಿಕರು ಉದ್ದುದ್ದ ಸರದಿ ಸಾಲಿನಲ್ಲಿ ನಿಂತು ಪಾರ್ಥಿವ ಶರೀರದ ಅಂತಿಮ ದರ್ಶನ ಸಿಗುವ ತನಕ ಬಿರು ಬಿಸಿಲಿನಲ್ಲಿ ಬಸವಳಿಯಬೇಕಾಯಿತು.

ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ ಕುಶಾಲನಗರದಲ್ಲಿ ಹುತಾತ್ಮ ಯೋಧ ದಿವಿನ್ ಪ್ರತಿಮೆ ಸ್ಥಾಪಿಸಬೇಕು. ಈಗ ನಿರ್ಮಾಣ ಹಂತದಲ್ಲಿ ಇರುವ ಮೈಸೂರು-ಕುಶಾಲನಗರ ಚತುಷ್ಪಥ ರಸ್ತೆಗೆ ಪಳಂಗೋಟು ದಿವಿನ್ ಹೆಸರು ಇಡಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ಈ ಮೂಲಕ ಕೊಡಗಿನ ವೀರ ಸೈನಿಕ ಪರಂಪರೆಗೆ ಗೌರವ ಕೊಟ್ಟಂತಾಗುತ್ತದೆ. ಮುಂದಿನ ಪೀಳಿಗೆ ಭಾರತೀಯ ಸೇನೆಗೆ ಸೇರಲು ಸ್ಫೂರ್ತಿ ಸಿಕ್ಕಂತಾಗುತ್ತದೆ ಎಂದು ಅಭಿಪ್ರಾಯಗಳು ವ್ಯಕ್ತ ಆಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕೊಡಗಿನಿಂದ ಸೇನೆಗೆ ಸೇರುವವರ ಸಂಖ್ಯೆ ಇಳಿಮುಖ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಯುವಕರು ಸೇನೆ ಸೇರುವಂತೆ ಪ್ರೋತ್ಸಾಹ ಸಿಗಲು ಈ ರೀತಿಯ ಕ್ರಮಗಳ ಅಗತ್ಯವಿದೆ ಎನ್ನುತ್ತಾರೆ ಹಿರಿಯ ಮಾಜಿ ಸೈನಿಕರು.

ಹೈಸ್ಕೂಲ್ ತನಕವೂ ನಾನು ಮತ್ತು ದಿವಿನ್ ಒಟ್ಟಿಗೆ ಓದಿದೆವು. ಆತ ನನ್ನ ಆತ್ಮೀಯ ಗೆಳೆಯ. ಆತ ರಜೆಯಲ್ಲಿ ಬರುವಾಗ ಏರ್‌ಪೋರ್ಟ್ನಿಂದ ಮನೆಗೆ ತರೆತರುವುದು, ರಜೆ ಮುಗಿಸಿ ವಾಪಸ್ ತೆರಳುವಾಗ ಏರ್‌ಪೋರ್ಟ್ ತನಕ ಹೋಗಿ ಬೀಳ್ಕೊಡುತ್ತಿದ್ದೆವು. ಪ್ರತಿ ದಿನವೂ ಫೋನ್ ಮಾಡಿ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದ. ಆತನ ವಾಹನ ಅಪಘಾತ ಆಗುವುದಕ್ಕೂ ಒಂದು ದಿನ ಮೊದಲೂ ಕರೆ ಮಾಡಿದ್ದ. ಮದುವೆ ದಿನಾಂಕ ನಿಗದಿಯಾಗಿರುವ ವಿಷಯ ಖುಷಿಯಿಂದ ಹಂಚಿಕೊAಡಿದ್ದ.

ಚಂದ್ರಶೇಖರ್, ಹಿತ್ಲಗದ್ದೆ ನಿವಾಸಿ

ಈ ಪೆಬ್ರವರಿಯಲ್ಲಿ ಮಗನ ವಿವಾಹ ಸಿದ್ಧತೆ ಮಾಡಿಕೊಂಡಿದ್ದೆವು. ಇದೇ ತಿಂಗಳು ಮನೆಗೆ ಬರುತ್ತೇನೆ ಅಂದಿದ್ದ. ಈ ಹಿಂದೆ ರಜೆಯಲ್ಲಿ ಬಂದಾಗ ಅವನ ತಂದೆ ಮೃತ ಪಟ್ಟಿದ್ದರು. ಈಗ ಇವನೇ ನನ್ನ ಬಿಟ್ಟು ಹೋಗಿದ್ದಾನೆ. ನಾನು ಶ್ರೀನಗರ ಉದಂಪುರ್ ಆಸ್ಪತ್ರೆಗೆ ತೆರಳಿದ ಸಂದರ್ಭ ಒಂದು ದಿನ ಕಳೆದ ನಂತರ ನನ್ನನ್ನು ಕಣ್ಣು ಬಿಟ್ಟು ನೋಡಿದ್ದ. ಈಗ ಈ ರೀತಿಯಲ್ಲಿ ನನ್ನ ಮಗನನ್ನು ನೋಡುತ್ತೇನೆ ಎಂದುಕೊAಡಿರಲಿಲ್ಲ.

ಪಳAಗೋಟು ಜಲಜಾಕ್ಷಿ, ಹುತಾತ್ಮ ಯೋಧ ದಿವಿನ್ ತಾಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net