

ವೈವಿಧ್ಯತೆ ಜಗದ ಸ್ವರೂಪ, ಸ್ವಭಾವ
ವಿಜಯವಾಣಿ ಸುದ್ದಿಜಾಲ ಧಾರವಾಡ
ವೈವಿಧ್ಯತೆ ಜಗದ ಸ್ವರೂಪ ಮತ್ತು ಸ್ವಭಾವ. ಈ ಜಗದ ಅಂತರಂಗದ ತತ್ವವು ಏಕ ಮತ್ತು ಅದ್ವೀತಿಯ ಆತ್ಮ. ಆತ್ಮ ಎಂದರೆ ಸ್ಥಾವರ, ಜಂಗಮಾತ್ಮಕ ಪ್ರಪಂಚದ ಸಾರ. ಇದನ್ನು ವಿವೇಚನೆಯಿಂದ ಅರಿತು ನಡೆಯುವುದೇ ಭಾವೈಕ್ಯದ ನಡೆ. ಅದು ವರ್ತಮಾನಕ್ಕೂ ಪ್ರಸ್ತುತ ಮತ್ತು ಅಗತ್ಯ ಎಂದು ಪ್ರಾಧ್ಯಾಪಕ ವಿದ್ವಾನ್ ನವೀನ ಶಾಸ್ತ್ರೀ ಪುರಾಣಿಕ ಹೇಳಿದರು.
ಶಂಕರ ಜಯಂತಿ ನಿಮಿತ್ತ ನಗರದ ಅನ್ವೇಷಣಕೂಟದ ವತಿಯಿಂದ ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಶಂಕರಾಚಾರ್ಯರು ಮತ್ತು ಭಾವೈಕ್ಯತೆ ಕುರಿತು ಉಪನ್ಯಾಸ ನೀಡಿದರು.
ಬೇರೆ ಬೇರೆ ಮತಗಳ ತಾಕಲಾಟದಲ್ಲಿ ವೈಚಾರಿಕ ಮತ್ತು ಭಾವನಾತ್ಮಕವಾಗಿ ದ್ವಂದ್ವ ಸಿದ್ಧಾಂತಗಳು ಬೇರೂರಿದ್ದ ಕಾಲದಲ್ಲಿ ಆಚಾರ್ಯ ಶಂಕರರು ಭಾರತದ ಉದ್ದಗಲಕ್ಕೆ ಸಂಚಾರಿಸಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಸನಾತನ ಧರ್ಮದ ಉಪನಿಷತ್ ಸಿದ್ಧಾಂತದ ಭಾವೈಕ್ಯ ಮತ್ತು ಸಮನ್ವಯ ಸಿದ್ಧಾಂತಕ್ಕೆ ಪೂರಕವಾದ ತತ್ವವನ್ನು ಪ್ರತಿಪಾದಿಸಿ ಪ್ರಸಾರ ಮಾಡಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶ್ರೀರಾಮ ಭಟ್ಟ ಮಾತನಾಡಿ, ಏಕವ್ಯಕ್ತಿ ಮತ್ತು ಏಕ ಗ್ರಂಥ ಪ್ರತಿಪಾದಿಸಿದ ಚಿಂತನೆ ಎಂದೂ ಈ ನೆಲದ ಸಮಷ್ಟಿ ಚಿಂತನೆಗೆ ಒಪ್ಪಿತವಾಗಲಿಲ್ಲ. ಸಕಾಲಿಕ ಹಾಗೂ ಸಾರ್ವಕಾಲಿಕವಾದ ವೈಚಾರಿಕ ವೈವಿಧ್ಯದ ಸ್ವಾತಂತ್ರ್ಯವು ಈ ನೆಲದ ಮೂಲ ಮನೋಧರ್ಮ. ವೇದೋಪನಿಷತ್ತುಗಳ ಕಾಲದಿಂದಲೂ ಇಂತಹ ವಿಭಿನ್ನ ಸ್ವತಂತ್ರ ಚಿಂತನೆಗಳು ತಾತ್ವಿಕ ರೂಪ ಪಡೆದವು. ಭಾರತ ಧರ್ಮದಲ್ಲಿ ಹಲವು ಮತ ಧರ್ಮಗಳು ಕಾಣಿಸಿಕೊಂಡವು. ಈ ಎಲ್ಲ ವಿಭಿನ್ನ ಮತ ಧರ್ಮಗಳಲ್ಲಿ ಸಮನ್ವಯ ಹಾಗೂ ಭಾವೈಕ್ಯವನ್ನು ಶಂಕರರು ತಮ್ಮ ಭಾಷ್ಯ ಮತ್ತು ಸ್ತೋತ್ರ ಗ್ರಂಥಗಳಲ್ಲಿ ಸಂತತವಾಗಿ ಪ್ರತಿಪಾದಿಸಿದರು ಎಂದರು.
ಪ್ರೊ. ದುಷ್ಯಂತ ನಾಡಗೌಡ, ಚಿದಂಬರಭಟ್ಟ ಜೋಶಿ, ರಮೇಶ ಇಟ್ನಾಳ, ಹರ್ಷ ಡಂಬಳ, ಜಿ.ಎಸ್.ಜೋಶಿ, ಮೋಹನ ಸುಂಕದ, ಕುಮಾರಸ್ವಾಮಿ ಪುರಾಣಿಕಮಠ, ರಮೇಶ ಗೋಡಬೋಲೆ, ಎಸ್.ಬಿ. ದ್ವಾರಪಾಲಕ, ಜಿ.ಎನ್.ಇನಾಮದಾರ, ಎಸ್.ಎಸ್.ಬಂಗಾರಿಮಠ, ಎಸ್.ಎಂ. ದೇಶಪಾಂಡೆ, ಬದರಿವಿಶಾಲ ಪರ್ವತಿಕರ, ಇತರರು ಇದ್ದರು.
ನರಸಿಂಹ ಪರಾಂಜಪೆ ಸ್ವಾಗತಿಸಿದರು. ಅನಿಲ ಕಾಖಂಡಕಿ ನಿರೂಪಿಸಿದರು. ಅನಂತ ಥಿಟೆ ವಂದಿಸಿದರು.