

ಶಿಗ್ಗಾಂವಿ: ಜನಪದ ಎಂಬುದು ಬದುಕು, ಸಂಸ್ಕೃತಿ, ಮನರಂಜನೆ, ಅಲಕ್ಷಿತ ಸಮುದಾಯಗಳ ಬವಣೆ ಹೀಗೆ ಹಲವು ಕಲಾ ಪ್ರಕಾರಗಳ ಸಂಗಮವಾಗಿದೆ. ಹೀಗಾಗಿ ಜನಪದಕ್ಕೆ ವೈವಿಧ್ಯತೆಯೇ ಜೀವಾಳವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಹೇಳಿದರು.
ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಪಿಎಚ್.ಡಿ ಕೋರ್ಸ್‌ವರ್ಕ್ ಕಮ್ಮಟ-2024-25 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಶೋಧನೆ ಎಂಬುದು ಜಟೀಲ ಮತ್ತು ಸಂಕಿರ್ಣವಾಗಿದ್ದು, ಅದರದ್ದೆ ಆದ ಸೌಂದರ್ಯವನ್ನು ಒಳಗೊಂಡಿದೆ. ಸಂಶೋಧನೆ ಎಂಬುದು ವ್ಯಕ್ತಿ ಪೂಜೆಯಲ್ಲ. ಅಲ್ಲಿ ವೈಭವೀಕರಣ ಸಲ್ಲದು. ಸಿದ್ಧ ಮಾದರಿಗೂ ಅಲ್ಲಿ ಅವಕಾಶ ಇಲ್ಲ. ಹೀಗಾಗಿ, ಸಂಶೋಧನೆ ಪಾರದರ್ಶಕ, ಸ್ಪಷ್ಟ ಗುರಿ, ಉದ್ದೇಶ, ಹೊಸ ಜ್ಞಾನದ ವಿಸ್ತಾರ, ಸತ್ಯದ ಸಾಕ್ಷಾತ್ಕಾರಕ್ಕೆ ಪೂರಕವಾಗಿರಬೇಕು ಎಂದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿ.ಟಿ. ಗುರುಪ್ರಸಾದ್ ಮಾತನಾಡಿ, ಜಾನಪದ ವಿಶ್ವವಿದ್ಯಾಲಯ ಸಂಶೋಧನೆ, ದಾಖಲೀಕರಣ, ಸಂವರ್ಧನೆಗೆ ಪ್ರಾಮುಖ್ಯತೆ ನೀಡುತ್ತಿದೆ. ಜಾನಪದ ಕ್ಷೇತ್ರದ ಸಮಗ್ರ ಬೆಳವಣಿಗೆಗೆ ಸಂಕಲ್ಪ ತೊಟ್ಟಿದ್ದು, ಆ ನಿಟ್ಟಿನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಕೆ.ಪ್ರೇಮಕುಮಾರ, ಡಾ.ವೆಂಕನಗೌಡ ಪಾಟೀಲ, ಡಾ. ಬಂಡು ಸುರೇಶ ಡಾ.ಬಸವರಾಜ ಚಂದ್ರಕಾಂತ, ಡಾ.ವಿಜಯಲಕ್ಷ್ಮೀ ಗೇಟಿಯವರ, ಡಾ. ಚಂದ್ರಪ್ಪ ಸೊಬಟಿ ಡಾ.ಹುಲಗಪ್ಪನಾಯಕ ಭಾಗವಹಿಸಿದ್ದರು.
ಸಹಾಯಕ ಕುಲಸಚಿವ ಶಹಜಾನ ಮುದಕವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಪದ ಕಲಾವಿದ ಶರೀ ಮಾಕಪ್ಪನವರ ಪ್ರಾರ್ಥಿಸಿದರು. ಸಹಾಯಕ ಸಂಶೋಧನಾಧಿಕಾರಿ ಡಾ.ಮಲ್ಲಿಕಾರ್ಜುನ ಮಾನ್ಪಡೆ ನಿರೂಪಿಸಿದರು.ಕೋರ್ಸ್ ವರ್ಕ್‌ನ ಸಂಚಾಲಕ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಗಿರೇಗೌಡ ಅರಳಿಹಳ್ಳಿ ವಂದಿಸಿದರು.