

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ವರ್ಗಗಳ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಇದು ಅವರ ಹುದ್ದೆಗೆ ಶೋಭೆ ತರುವಂಥದ್ದಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಹೇಳಿದರು.
ಮಧ್ಯಪ್ರದೇಶದ ಕಾರ್ಯಕ್ರಮವೊಂದರಲ್ಲಿ ಮೋದಿ ಅವರು ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಮೀಸಲಾತಿ ಕಸಿದುಕೊಂಡು ಮುಸ್ಲಿಮರಿಗೆ ಹಂಚಿದೆ ಎಂದು ಆರೋಪಿಸಿದ್ದಾರೆ. ವ್ಯಕ್ತಿಯಾಗಿ ಹೇಳಿದರೆ ತೊಂದರೆಯಿಲ್ಲ. ಆದರೆ ಪ್ರಧಾನಿಯಾಗಿ ಇಂತಹ ಸುಳ್ಳು ಹೇಳಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕರ್ನಾಟಕದ ಹಿಂದುಳಿದ ಆಯೋಗಕ್ಕೆ ನೋಟಿಸ್ ನೀಡಿರುವುದು ಕೂಡ ಸರಿಯಲ್ಲ. ಅದರಲ್ಲೂ ರಾಷ್ಟ್ರೀಯ ಹಿಂದುಳಿದ ವರ್ಗದ ಅಧ್ಯಕ್ಷ ಹಂಸರಾಜ್ ಕೂಡ ಅದನ್ನೇ ಮಾತನಾಡುತ್ತಾರೆ. ಆದರೆ ಅವರಿಗೂ ಸರಿಯಾದ ಮಾಹಿತಿ ಇಲ್ಲ. ಹೋಗಲಿ ಕರ್ನಾಟಕದಿಂದ ಮಾಹಿತಿಯನ್ನಾದರೂ ಕೇಳಬಹುದಿತ್ತು. ಅದನ್ನೂ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಮುಸ್ಲಿಮರಿಗೆ ನೀಡಿದ್ದ ಶೇ.4ರಷ್ಟು ಮೀಸಲಾತಿ ಕಿತ್ತುಕೊಂಡು ಒಕ್ಕಲಿಗರು ಮತ್ತು ಇತರರಿಗೆ ನೀಡಿದ್ದನ್ನು ಒಕ್ಕಲಿಗರು ಮತ್ತು ಇತರರು ವಿರೋಧಿಸಿದ್ದರು. ಯಾವ ಕುಲಶಾಸ್ತ್ರೀಯ ಅಧ್ಯಯನ ನಡೆಸದೆ ಹೀಗೆ ಒಬ್ಬರಿಗೆ ಕೊಟ್ಟ ಮೀಸಲಾತಿ ಕಿತ್ತುಕೊಂಡು ಬೇರೆಯವರಿಗೆ ಕೊಡುವುದು ಸರಿಯಲ್ಲ ಎಂದು ತಿಳಿಸಿದರು.
ರಾಷ್ಟ್ರದ ಹಿಂದುಳಿದ ವರ್ಗಗಳೆಲ್ಲವೂ ಬಿಜೆಪಿಯ ವಿರುದ್ಧವೇ ಇರುತ್ತದೆ ಎಂಬ ಆತಂಕ ಪ್ರಧಾನಿ ಅವರನ್ನು ಕಾಡುತ್ತಿದೆ. ಹಾಗಾಗಿ ಅವರು ರಾಜ್ಯದ ಹಿಂದುಳಿದ ವರ್ಗಕ್ಕೆ ನೋಟಿಸ್ ಕೊಡುವ ಮೂಲಕ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಶೇ.73ರಷ್ಟು ಹಿಂದುಳಿದ ವರ್ಗಗಳಿದ್ದು, ಆ ವರ್ಗಗಳೆಲ್ಲವೂ ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಪಡೆಯುತ್ತಿವೆ ಎಂಬ ಹೆದರಿಕೆಯೂ ಪ್ರಧಾನಿಗೆ ಇದೆ ಎಂದರು.
ಪ್ರಮುಖರಾದ ರಮೇಶ್ ಹೆಗ್ಡೆ, ಎಸ್.ಪಿ.ಶೇಷಾದ್ರಿ, ಜಿ.ಡಿ.ಮಂಜುನಾಥ್, ಮೋಹನ್, ರಂಗನಾಥ್, ನಾಗರಾಜ್ ಕಂಕಾರಿ, ಯು. ಶಿವಾನಂದ್, ಮಂಜುನಾಥ ಬಾಬು, ಪದ್ಮಾ ಸುದ್ದಿಗೋಷ್ಠಿಯಲ್ಲಿದ್ದರು.