ವಿವಿಧೆಡೆ ನಕಲಿ ಕ್ಲಿನಿಕ್‌ಗಳಿಗೆ ಬೀಗ

2 SDLP 5 WEB
Published on

ಸಾದಲಿ, ಬಶೆಟ್ಟಿಹಳ್ಳಿಯಲ್ಲಿ ಆರೋಗ್ಯ ಇಲಾಖೆ ಕಾರ್ಯಾಚರಣೆ ಆರೋಪಪಟ್ಟಿ ಸಿದ್ಧಪಡಿಸಿ ಡಿಸಿ ಕೋರ್ಟ್‌ಗೆ ಸಲ್ಲಿಕೆ

ಶಿಡ್ಲಘಟ್ಟ: ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ ನೇತೃತ್ವದಲ್ಲಿ ಆರೋಗ್ಯ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿ ತಾಲೂಕಿನ ಎರಡು ಕಡೆ ಗುರುವಾರ ನಕಲಿ ಕ್ಲಿನಿಕ್‌ಗಳನ್ನು ಮುಚ್ಚಿಸಿದರು.

ಸಾದಲಿ ಗ್ರಾಮದಲ್ಲಿ ಎಸ್.ವಿ. ಸಹದೇವ್ ಎಂಬುವವರು ಸಣ್ಣ ಕೊಠಡಿಯಲ್ಲಿ ಹಾಗೂ ಬಶೆಟ್ಟಿಹಳ್ಳಿ ವೃತ್ತದ ಬಳಿ ನಾಮಫಲಕವಿಲ್ಲದ ಕ್ಲಿನಿಕ್‌ನಲ್ಲಿ ಎಲ್.ಲೋಕನಾಥ ರೆಡ್ಡಿ ಎಂಬುವವರು ಸೂಕ್ತ ವಿದ್ಯಾರ್ಹತೆ ಹಾಗೂ ಕೆಪಿಎಂಇ ನೋಂದಣಿ ಪ್ರಮಾಣಪತ್ರವಿಲ್ಲದೇ ಅನಧಿಕೃತವಾಗಿ ಜನರಿಗೆ ಅಲೋಪಥಿ ಔಷಧಗಳನ್ನು ನೀಡಿ ಚಿಕಿತ್ಸೆ ನೀಡುತ್ತಿದ್ದರು. ಈ ಎರಡೂ ಕ್ಲಿನಿಕ್‌ಗಳನ್ನು ಮುಚ್ಚಿಸಿದ್ದು, ಅವರು ರೋಗಿಗಳಿಗೆ ನೀಡುತ್ತಿದ್ದ ಕೆಲವು ಮಾತ್ರೆ ಹಾಗೂ ಇತರ ಸಲಕರಣೆಗಳನ್ನು ಜಪ್ತಿ ಮಾಡಿ, ದೋಷಾರೋಪಣಾ ಪಟ್ಟಿ ಸಿದ್ಧಪಡಿಸಿ ಜಿಲ್ಲಾ ಆರೋಗ್ಯಾಧಿಕಾರಿಗಳ ಮೂಲಕ ಕೆಪಿಎಂಇ ಅಧ್ಯಕ್ಷ ಹಾಗೂ ಜಿಲ್ಲಾ ಸಕ್ಷಮ ಪ್ರಾಧಿಕಾರಿಗಳಾದ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಈ ಎರಡೂ ಪ್ರಕರಣಗಳ ವಿಚಾರಣೆ ನಡೆಸಲು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ ಕೋರಿದ್ದಾರೆ.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್ ದೇವರಾಜ್, ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಟಿ.ಆರ್. ಯಶ್ವಂತ್, ಸಾದಲಿ ಪ್ರಾ.ಆ.ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್. ಸುನೀಲ್‌ಕುಮಾರ್ ಮತ್ತು ಬಶೆಟ್ಟಿಹಳ್ಳಿಯ ಫಾರ್ಮಸಿ ಅಧಿಕಾರಿ ಡಿ.ಎಸ್. ರಹಮತ್ ಉಲ್ಲಾ ಹಾಜರಿದ್ದರು.

ಟಿಎಚ್‌ಒ ಎಚ್ಚರಿಕೆ

ಮುಂದಿನ ದಿನಗಳಲ್ಲಿ ಕೆಪಿಎಂಇ ಪ್ರಮಾಣಪತ್ರ ಪಡೆಯದೇ ಹಾಗೂ ಸೂಕ್ತ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ಯಾರೇ ವೈದ್ಯ ವೃತ್ತಿಯನ್ನು ನಡೆಸುತ್ತಿದ್ದಲ್ಲಿ ಅಂತಹವರಿಗೆ ಇದು ಎಚ್ಚರಿಕೆಯ ಗಂಟೆ. ಅಂತಹವರು ಕಡ್ಡಾಯವಾಗಿ ಕೆಪಿಎಂಇ ಪ್ರಮಾಣಪತ್ರ ಪಡೆಯಲು ಕ್ರಮವಹಿಸಲು ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net