ಸಾಮರಸ್ಯ ಕದಡುವುದರಿಂದ ತಿಲಕರ ಆಶಯಕ್ಕೆ ಧಕ್ಕೆ

Disturbance of harmony threatens Tilak's hope
ಜಮಖಂಡಿ ತಾಲೂಕಿನ ಜಕನೂರ ಗ್ರಾಮದ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದಲ್ಲಿ ನಡೆದ ಕಾರ್ಯಕ್ರಮವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು.
Published on

ಜಮಖಂಡಿ: ಗಣೇಶೋತ್ಸವದಲ್ಲಿ ಸಾಮರಸ್ಯ ಕದಡುತ್ತಿರುವುದು ಬಾಲಗಂಗಾಧರ ತಿಲಕರ ಮನಸ್ಸಿಗೆ ನೋವಾಗುತ್ತದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಜಕನೂರ ಗ್ರಾಮದ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದಲ್ಲಿ ಶುಕ್ರವಾರ ಹಮ್ಮಿಕೊಂಡ ಭಂಡಾರ ಸಂಸ್ಕೃತಿ ಉತ್ಸವ, ಜಾನಪದ ಮತ್ತು ಡೊಳ್ಳಿನ ಕಲಾಮಹೋತ್ಸವ, 29ನೇ ಸಿದ್ಧಸಿರಿ ಸಂಭ್ರಮ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ, ಮತ, ಪಂಥಗಳನ್ನು ಮರೆತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಎಲ್ಲರೂ ಒಂದು ಎಂಬ ಭಾವನೆಯಿಂದ ಬದುಕು ಸಾಗಿಸಬೇಕಾಗಿದೆ ಎಂದರು.

ಹಸಿದ ಹೊಟ್ಟೆಗೆ ಅನ್ನ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಕಂಡ ಅಪರೂಪದ ಸಿಎಂ. ಭಾಗ್ಯಗಳ ವಿಧಾತರಾಗಿದ್ದಾರೆ. ರಾಜ್ಯದಲ್ಲಿ ಮಹಿಳೆಯರು ತಲೆ ಎತ್ತಿ ಬದುಕು ಸಾಗಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ 4 ಕೋಟಿ ಜನರು ಬದುಕು ಕಟ್ಟಿಕೊಂಡಿದ್ದಾರೆ. 52 ಸಾವಿರ ಕೋಟಿ ಹಣ ಪ್ರತಿವರ್ಷ ಯೋಜನೆಗೆ ಮೀಸಲಿದೆ ಎಂದರು.

ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮಾತನಾಡಿ, ಅಂತರಾತ್ಮವನ್ನು ಶುದ್ಧವಾಗಿಟ್ಟುಕೊಂಡು ಸಮಾಜ ಪರಿವರ್ತನೆ ಮಾಡಬೇಕು. ಸಜ್ಜನರು ಮೂಲೆ ಸೇರಿದ್ದಾರೆ. ದುರ್ಜನರು ಮುಂದೆ ಬರುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಕಾರ್ಯ ಆಗಬೇಕು. ಈ ಹಿಂದೆ ಕುರುಬರು ಶಾಸಕರಾಗಬಾರದು ಎಂಬ ಕಾಲವಿತ್ತು. ಆದರೆ ಇಂದು ಸಂಗೊಳ್ಳಿ ರಾಯಣ್ಣ ಕುಲದ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಎಂದರು.

ದಾಸೋಹ ಪದ್ಧತಿ ಉತ್ತರ ಭಾರತದಲ್ಲಿ ಎಲ್ಲೂ ಕಾಣಸಿಗೋದಿಲ್ಲ. ನಮ್ಮ ನಾಡಿನ ಮಠ ಮಾನ್ಯಗಳಲ್ಲಿ ಅನ್ನ ದಾಸೋಹ, ಅಕ್ಷರ ದಾಸೋಹ ನಿರಂತರವಾಗಿ ಹಿಂದಿನಿಂದ ನಡೆದುಕೊಂಡು ಬಂದಿದೆ. ಯಾವಾಗಲೂ ಮಠದ ಪರಂಪರೆಯನ್ನು ಕಡೆಗಣಿಸಬಾರದು ಎಂದರು.

ರಾಜ್ಯ ಕಾಂಗ್ರೆಸ್ ವಕ್ತಾರ ನಿಕೇತರಾಜ್ ಮೌರ್ಯ ಮಾತನಾಡಿ, ಬ್ರಹ್ಮ ಜ್ಞಾನ ಬಂದದ್ದೂ ಕುರಿ ಕಾಯುವ ಜನರಿಂದ. ಬದುಕಿನ ನಶ್ವರತೆ ಕಂಡವರು ಕುರುಬರು. ಜ್ಞಾನ, ಕಷಿ, ಪಶುಪಾಲನೆ, ಆಧ್ಯಾತ್ಮಿಕ, ಲೌಕಿಕ ಜ್ಞಾನ ನೀಡಿದ ಸಮಾಜ ಹಾಲುಮತ ಸಮಾಜ ಎಂದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರಿಗೆ ಕಪ್ಪು ಚುಕ್ಕೆ ತರುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಅದು ಸಲ ಆಗುವುದಿಲ್ಲ. ಸಿದ್ದರಾಮಯ್ಯ ಬಡವರ ಅಭಿವೃದ್ಧಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಎಂದರು.

ಬೆಂಗಳೂರಿನ ಮುಕ್ತೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಶ್ರೀಮಠದ ಮಾಧುಲಿಂಗ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ವಿವಿಧ ಕಲಾವಿದರು, ಸಾಹಿತಿಗಳು, ಗಾಯಕರಿಗೆ ಸಿದ್ಧಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಂಗಳ ಮುಖಿಯರನ್ನು ಸನ್ಮಾನಿಸಲಾಯಿತು.

ವರ್ಚಗಲ್ ಜಗದೀಶಾನಂದ ಶ್ರೀಗಳು, ಹೊಟಗಿ ಯಲ್ಲಾಲಿಂಗ ಮಹಾರಾಜರು, ಕಲ್ಲೂರ ದೊಡ್ಡಪ್ಪ ಮಹಾರಾಜರು, ಬತಗುಣಕಿ ಅಮೋಘಸಿದ್ದ ಮಹಾರಾಜರು, ಸಾರವಾಡದ ಚಿಕ್ಕಪ್ಪಯ್ಯ ಶ್ರೀಗಳು, ಸುಶೀಲಕುಮಾರ ಬೆಳಗಲಿ, ರಂಗನಗೌಡ ಪಾಟೀಲ, ರಾಹುಲ ಕಲೂತಿ, ಕಲ್ಲಪ್ಪ ಗಿರಡ್ಡಿ, ವರ್ದಮಾನ ನ್ಯಾಮಗೌಡ, ಸಿದ್ದು ಮಿಸಿ, ಈಶ್ವರ ವಾಳೆನ್ನವರ, ಸಿದ್ದು ಕೊಣ್ಣೂರ, ಅರ್ಜುನ ದಳವಾಯಿ, ದಾದಾಪೀರ ಶೇಖ, ಇಸ್ಮಾಯಿಲ್ ಪಾರ್ಥನಳ್ಳಿ, ಹೂವಪ್ಪ ಉಷಾಕರ, ರಾಮಣ್ಣ ಕಡಕೋಳ, ಎಂ.ಎಸ್.ಜಕ್ಕನ್ನವರ, ಬಿ.ಜಿ.ಪಾಟೀಲ, ಸೂರಜ್ ಕುಡ್ರಾಣಿ, ನಾಗಪ್ಪ ಹೆಗಡಿ, ಅಬೂಬಕರ ಕುಡಚಿ ಇತರರು ಇದ್ದರು.

ಅಕ್ಷತಾ ಮುತ್ತೂರ ಪ್ರಾರ್ಥಿಸಿದರು. ಎಸ್.ಎಚ್.ತೆಗ್ಗನ್ನವರ ಸ್ವಾಗತಿಸಿದರು. ಮಹಾದೇವ ಪೂಜಾರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net