ವಿ.ಎಸ್. ಉಗ್ರಪ್ಪ ಹೇಳಿಕೆ ಸರಿಯಲ್ಲ, ಚುನಾವಣಾ ಆಯುಕ್ತ ಜಿ.ಎಸ್‌.ಸಂಗ್ರೇಶಿ ಹೇಳಿಕೆ

IMG_20251012_133929
Published on

ಕೊಪ್ಪಳ: ಸರ್ಕಾರಿ ಕಾರ್ಯಕ್ರಮದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸಿಎಂಗೆ ಮುಜುಗರ ಆಗುವಂತೆ ಮಾತನಾಡಿದ್ದು ಸರಿಯಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಜೀವನ ಮುಡಿಪಾಗಿಟ್ಟ ಸಿದ್ದರಾಮಯ್ಯ ಅವರಿಗೆ ಆ ರೀತಿ ಮಾತನಾಡಬಾರದಿತ್ತು ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.

ಉಗ್ರಪ್ಪ ಸಾಮಾಜಿಕ ನ್ಯಾಯ ತಳಹದಿಯಿಂದ ಬಂದವರು. ಸಿದ್ದರಾಮಯ್ಯ ಜತೆಗಾರರು. ಹೀಗಿರುವಾಗ ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಎದುರಿಗೆ ನಮ್ಮ ತಟ್ಟೆಯಲ್ಲಿನ ಅನ್ನ ಕಸಿದುಕೊಳ್ಳಬೇಡಿ ಎಂದಿದ್ದು ಎಷ್ಟು ಸರಿ ? ತಮ್ಮ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯಕ್ಕಾಗಿ ಬಡಿದಾಡುತ್ತಿದ್ದಾರೆ‌. ಅವರು ಇನ್ನೊಬ್ಬರ ಅನ್ನ ಕಸಿದುಕೊಳ್ಳುವುದಿಲ್ಲ. ಅವರು ಒಂದು ಜನಾಂಗಕ್ಕೆ ಸೀಮಿತರಲ್ಲ. ಪಕ್ಷ ಅಥವಾ ಬೇರೆ ವೇದಿಕೆಗಳಲ್ಲಿ ಮೀಸಲಾತಿ ಬಗ್ಗೆ ಪ್ರಶ್ನಿಸಬಹುದಿತ್ತು. ಅದು ಬಿಟ್ಟು ವೇದಿಕೆ ಮೇಲೆ ಮುಜುಗರ ಉಂಟುಮಾಡುವಂತೆ ಮಾತನಾಡಿದ್ದು ಸರಿಯಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಪ್ರಜ್ಞಾವಂತರು ಇದನ್ನು ಒಪ್ಪುವುದಿಲ್ಲ. ನನಗೆ ಗೊತ್ತಿರುವ ಮಾಹಿತಿ ಹೇಳಬೇಕು.‌ ಇಲ್ಲದಿದ್ದರೆ ನನ್ನದೂ ತಪ್ಪಾಗುತ್ತದೆ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.

ಹಿಂದುಳಿದ ವರ್ಗಗಳ ಇಲಾಖೆ ಸಮೀಕ್ಷೆ ಬಗ್ಗೆ ಮಾತನಾಡಿ, ಸಮಾಜದಲ್ಲಿ ಎಲ್ಲ ವರ್ಗದವರಿದ್ದಾರೆ. ಎಲ್ಲ ಸಮುದಾಯಗಳಲ್ಲಿ ಬಡವರಿದ್ದಾರೆ. ಅವರ ಸ್ಥಿತಿ ಸರ್ಕಾರ ಅರಿಯಬೇಕು. ಕಲ್ಯಾಣ ಯೋಜ‌ನೆ ರೂಪಿಸಬೇಕು. ಅದಕ್ಕೆ ಡಾಟಾ ಬೇಕು. ಅದು ಸರ್ಕಾರದ ಕೆಲಸವೂ ಹೌದು. ನಮ್ಮ ಮನೆಗೆ ಬಂದರೆ ನಾನು ಮಾಹಿತಿ‌ ಕೊಡುವೆ ಎಂದು ತಿಳಿಸಿದರು.

====

ನವೆಂಬರ್ ನಿಂದ ಮತದಾರರ ಪಟ್ಟಿ ಪರಿಷ್ಕರಣೆ

ಸುಪ್ರೀಂ ಕೋರ್ಟ್ ಆದೇಶದಂತೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ನವೆಂಬರ್ ನಿಂದ ಕೆಲಸ ಆರಂಭಿಸುತ್ತೇವೆ. ಕೇಂದ್ರ ಚುನಾವಣಾ ಆಯೋಗ ನಾವು ಮಾಡಿದ ಬಳಿಕ ಪಟ್ಟಿ ಪರಿಷ್ಕರಿಸಲಿ ಎಂದು ಪತ್ರ ಬರೆದಿರುವೆ. ಅವರೂ ಸ್ಥಳೀಯ ಸಂಸ್ಥೆ ಚುನಾವಣೆ ಇರುವೆಡೆ ಪರಿಷ್ಕರಣೆ ಮಾಡುವುದಿಲ್ಲವೆಂದು ತಿಳಿಸಿದ್ದಾರೆ‌. ಮೊದಲು ಗ್ರೇಟರ್ ಬೆಂಗಳೂರು ಪಟ್ಟಿ ಪರಿಷ್ಕರಿಸಿ ಐದು ಪಾಲಿಕೆ ಚುನಾವಣೆ ಮಾಡುತ್ತೇವೆ. ನಂತರ ಜಿಪಂ, ತಾಪಂ‌ ಮೀಸಲಾತಿ ಬಂದ ನಂತರ ಚುನಾವಣೆ ನಡೆಯುವುದು. ಗ್ರಾಪಂ ಅವಧಿ ಮುಗಿಯಲಿದ್ದು, ಅವುಗಳ ಚುನಾವಣೆಯೂ ನಡೆಯಲಿದೆ. ನಗರ, ಸ್ಥಳೀಯ ಸಂಸ್ಥೆಗಳು ಹಾಗೂ ಜಿಪಂ, ತಾಪಂ‌ ಚುನಾವಣೆಗಳನ್ನೂ ಬ್ಯಾಲೆಟ್ ಪೇಪರ್ ಮೂಲಕ ನಡೆಸಲಾಗುವುದು‌. ಆಯೋಗಕ್ಕೆ ಆ ಸ್ವಾತಂತ್ರ್ಯ ಇದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net