

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025ರ ಅಂತಿಮ ಮತದಾರ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ಜನವರಿ 2025ಕ್ಕೆ ಅನ್ವಯವಾಗುವಂತೆ ಜಿಲ್ಲೆಯಲ್ಲಿ 8,05,768 ಪುರುಷ, 8,10,647 ಮಹಿಳಾ ಹಾಗೂ 95 ಜನ ತೃತೀಯಲಿಂಗಿಗಳು ಸೇರಿ ಒಟ್ಟು 16,16,415 ಅರ್ಹ ಮತದಾರರು ಇದ್ದಾರೆ. 2024ರ ಅ. 29ರಂದು ಪ್ರಕಟಿಸಿದ್ದ ಕರಡು ಮತದಾರ ಪಟ್ಟಿಯಲ್ಲಿ 8,04,508 ಪುರುಷ, 8,07,935 ಮಹಿಳಾ ಹಾಗೂ 93 ತೃತೀಯಲಿಂಗಿಗಳು ಸೇರಿ ಒಟ್ಟು 16,12,536 ಜನ ಮತದಾರರಾಗಿದ್ದರು. ಪರಿಷ್ಕರಣೆ ನಂತರ ಜಿಲ್ಲೆಯಲ್ಲಿ 16,16,415 ಮತದಾರರಾಗಿದ್ದಾರೆ ಎಂದರು.
ಜ. 1ಕ್ಕೆ ಅರ್ಹರಾಗಿರುವ ಅಂತಿಮ ಮತದಾರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಅಂತಿಮ ಮತದಾರ ಪಟ್ಟಿಯನ್ನು ಆಯಾ ಮತಗಟ್ಟೆ, ಮತದಾರ ನೋಂದಣಿ ಅಧಿಕಾರಿಗಳ ಕಚೇರಿ, ಸಹಾಯಕ ಮತದಾರ ನೋಂದಣಿ ಅಧಿಕಾರಿಗಳ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಜಿಲ್ಲೆಯ 16,336 ಜನ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ಅಂಚೆ ಮೂಲಕ ರವಾನಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.
ಕಾಂಗ್ರೆಸ್ನ ಪ್ರಕಾಶ ಹಳಿಯಾಳ, ಶಿವಾನಂದ ನಿಗದಿ, ಭಾರತೀಯ ಜನತಾ ಪಕ್ಷದ ಸಿದ್ದು ಕಲ್ಯಾಣಶೆಟ್ಟರ್, ಜಾತ್ಯಾತಿತ ಜನತಾದಳದ ದೇವರಾಜ್ ಕಂಬಳಿ ಸೇರಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಇತರ ಅಧಿಕಾರಿಗಳು ಇದ್ದರು.